Sidlaghatta : ಶಿಡ್ಲಘಟ್ಟ ನಗರದಲ್ಲಿನ ರೈಲ್ವೆ ಕೆಳಸೇತುವೆಗಳು ಸಣ್ಣ ಮಳೆ ಬಂದರೂ ಜಲಾವೃತವಾಗುತ್ತದೆ. ನೀರು ನಿಂತು ಕೆರೆಯಂತಾಗುತ್ತವೆ. ಲಾರಿ, ಬಸ್ನಂತಹ ವಾಹನಗಳು ಹರಸಾಹಸಪಟ್ಟು ಸಂಚರಿಸಿದರೆ. ಕಾರು ಮತ್ತು ಬೈಕ್ ಸವಾರರು ಮಳೆ ನೀರಿನಲ್ಲಿ ಕಷ್ಟಪಟ್ಟು ಸಾಗಬೇಕಿದೆ.
ಈ ಸಮಸ್ಯೆಯ ಕುರಿತಾಗಿ ಶುಕ್ರವಾರ ಶಾಸಕ ಬಿ.ಎನ್ ರವಿಕುಮಾರ್ ರವರು ನಗರಕ್ಕೆ ಸೇರಿರುವ ಎಲ್ಲಾ ರೈಲ್ವೆ ಕೆಳಸೇತುವೆಗಳ ವಿಕ್ಷಣೆ ನಡೆಸಿದರು. ಮಳೆಬಿದ್ದಾಗ ಜನಸಾಮಾನ್ಯರು ಹಾಗೂ ವಾಹನಗಳು ಸಂಚರಿಸಲು ಯಾವುದೇ ಅನಾನುಕೂಲವಾಗದಂತೆ ಈಗಲೇ ಎಚ್ಚೆತ್ತುಕೊಂಡು ಮಳೆನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಕಳೆದ ಸುಮಾರು ವರ್ಷಗಳಿಂದ ನಗರದಲ್ಲಿ ಚರಂಡಿಗಳು ಮತ್ತು ರಸ್ತೆ ಬದಿಯಲ್ಲಿ ಕಸ ತುಂಬಿ ತುಳುಕುತ್ತಿದ್ದವು. ಶಾಸಕರಾದ ತಕ್ಷಣವೇ ಸ್ವಂತ ಹಣದಲ್ಲಿ ಸ್ವಚ್ಛತೆ ಕಾಮಗಾರಿಯನ್ನು ನಡೆಸುತ್ತಿದ್ದು, ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಸ್ವಚ್ಛತೆ ಕಾಮಗಾರಿಗಳು ನಡೆದಿರುವ ಸ್ಥಳಗಳಿಗೆ ಅವರು ಭೇಟಿ ನೀಡಿ ಪರಿಶೀಲಿಸಿದರು.
“ನಗರಸಭೆ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಚುನಾವಣೆ ನಂತರ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಗರಸಭೆಗೆ ಬರುವಂತಹ ಅನುದಾನಗಳನ್ನು ಉಪಯೋಗಿಸಿಕೊಂಡು ನಗರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರಸಭಾ ಅಧ್ಯಕ್ಷೆ ಸುಮಿತ್ರಾ ರಮೇಶ್, ನಗರಸಭೆ ಸದಸ್ಯರಾದ ರಾಘವೇಂದ್ರ, ಲಕ್ಷ್ಮೀನಾರಾಯಣ, ಮೌಲ, ವೆಂಕಟಸ್ವಾಮಿ, ನಂದಕಿಶನ್, ರಾಜ್ ಕುಮಾರ್, ಅನ್ಸರ್, ನವೀನ್, ಸುರೇಶ್ ಮುಖಂಡರಾದ ತಾದೂರು ರಘು, ನಾರಾಯಣಸ್ವಾಮಿ, ನಗರಸಭೆಯ ಅಧಿಕಾರಿ ಮುರಳಿ ಹಾಜರಿದ್ದರು.