Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೆಗೌಡನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯನುಭವ ಚಟವಟಿಕೆ ಅಡಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಗ್ರಾಮಸ್ಥರೊಂದಿಗೆ ನಡೆದ ಮಳೆ ನೀರು ಕೊಯ್ಲು ಗುಂಪು ಚರ್ಚಾ ಸಭೆಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿನಿಯರಾದ ಹಂಸಶ್ರೀ ಮತ್ತು ಚೈತ್ರ ಮಾತನಾಡಿದರು.
ಕಡಿಮೆ ನೀರು ಇದ್ದರೂ ಕೂಡ ಹನಿ ನೀರಾವರಿ ಪದ್ಧತಿ ಉಪಯೋಗಿಸಿಕೊಂಡು ಎಲ್ಲಾ ರೀತಿಯ ಬೆಳೆಗಳನ್ನು ಬೆಳೆದು ಮಾದರಿಯಾಗಬಹುದು. ಪ್ರತಿಯೊಬ್ಬರೂ ತಮ್ಮ ಜಮೀನು ಮತ್ತು ಮನೆಗಳ ಮೇಲೆ ಬೀಳುವ ಪ್ರತಿ ಹನಿ ಮಳೆ ನೀರನ್ನೂ ಸಂಗ್ರಹಿಸಬೇಕು. ಅಂತರ್ಜಲ ಕುಸಿದಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳನ್ನು ನೆಚ್ಚಿಕೊಂಡಿರಬಾರದು. ಮಳೆ ನೀರು ಸಂರಕ್ಷಣೆ, ನೀರಿನ ಮೂಲಗಳ ಪುನರುಜ್ಜೀವನ, ತ್ಯಾಜ್ಯ ನೀರಿನ ಶುದ್ಧೀಕರಣ ಮತ್ತು ಮರುಬಳಕೆ, ಮರಗಳನ್ನು ನೆಡುವುದು ಮತ್ತು ಸಂಬಂಧಿತ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆದರೆ ಮಾತ್ರ ಈ ಜಲ ಸಂಕಷ್ಟದಿಂದ ನಾವು ಪಾರಾಗಬಹುದಾಗಿದೆ. ಅಂತರ್ಜಲ ಹೆಚ್ಚಿಸಲು ಮಳೆ ನೀರು ಕೊಯ್ಲು ಮತ್ತು ಕೃಷಿ ಹೊಂಡ ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ಅನುಮೋದನೆ ಪಡೆದು ಮನೆ ಮತ್ತು ಹೊಲಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಂತರ್ಜಲ ಅಥವಾ ಕೊಳವೆ ಬಾವಿ ಮರುಪೂರಣ:
ಕೃಷಿ ವಿದ್ಯಾರ್ಥಿಗಳಾದ ಆದರ್ಶ ಹಾಗೂ ಆರವ್ ಮಾತನಾಡಿ, ಕೊಳವೆ ಬಾವಿ ಮರುಪೂರಣ ಮತ್ತು ಕೊಳವೆ ಬಾವಿ ಬಳಿ ಇಂಗು ಗುಂಡಿ ಮಾಡಿ ಕೊಳವೆ ಬಾವಿಗಳಲ್ಲಿ ನೀರನ್ನು ಹೆಚ್ಚಿಸುವ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಿದರು
ಅಣಬೆಯ ಬೇಸಾಯ ಹೆಚ್ಚು ಆದಾಯ:
ಕೃಷಿ ವಿದ್ಯಾರ್ಥಿಗಳಾದ ಅರ್ಪಿತಾ, ಅಂಕಿತಾ ಮತ್ತು ಬಿಂದು ಅಣಬೆಯನ್ನು ಮನೆಯಲ್ಲಿ ಉತ್ಪಾದಿಸುವ ಬಗ್ಗೆ ಮಾಹಿತಿ ನೀಡಿದರು. ಅಣಬೆ ಬೇಸಾಯದ ಪದ್ಧತಿಯ ಪ್ರಾತ್ಯಕ್ಷಿಕೆ, ಅಣಬೆಯ ಉಪಯೋಗಗಳಾದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು, ಕೊಲೆಸ್ಟ್ರಾಲ್ ಕರಗಿಸುವುದು, ಮಧುಮೇಹ ತಗ್ಗಿಸುವುದು, ಹೃದಯಕ್ಕೆ ಒಳ್ಳೆಯದು, ಕ್ಯಾನ್ಸರ್ ವಿರುದ್ಧ ಹೊರಾಟ, ಮೂಳೆಗಳ ಆರೋಗ್ಯ ಹೆಚ್ಚಿಸುವುದರ ಬಗ್ಗೆ ವಿವರವಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಗ್ರಾಮಸ್ಥರು ಹಾಗೂ ಕೃಷಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.