Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ಆರಂಭವಾದ ದಸರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಧುಸೂದನ ಸಾಯಿ ಅವರು ಮಾತನಾಡಿದರು.
ಸಂಸ್ಕೃತಿ ಮತ್ತು ಪರಂಪರೆ ಉಳಿಸುವಲ್ಲಿ ಆಚರಣೆ ಮತ್ತು ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತವೆ. ಆಚರಣೆಗಳು ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ, ಆಚರಣೆಗಳಿಂದ ಪರಂಪರೆಯ ರಕ್ಷಣೆ ಸಾಧ್ಯ. ಪಾರಮಾರ್ಥಿಕ ಮತ್ತು ಲೌಕಿಕ ಶಿಕ್ಷಣವನ್ನು ಒಟ್ಟಿಗೆ ನೀಡುವುದು ಭಾರತೀಯ ಶಿಕ್ಷಣ ಪರಂಪರೆಯ ವೈಶಿಷ್ಟ್ಯ. ಭಾರತದ ಸನಾತನ ಪರಂಪರೆಯು ಅನೇಕ ಋಷಿಗಳು, ಮುನಿಗಳ ಚಿಂತನೆ ಹಾಗೂ ಸಾರಸಂಗ್ರಹಗಳಿಂದ ರೂಪಿತವಾಗಿವೆ ಎಂದು ಅವರು ಹೇಳಿದರು.
ದಸರಾ ಮಹೋತ್ಸವದ ಅಂಗವಾಗಿ ಗಣಪತಿ ಹೋಮ, ಸಹಸ್ರ ಮೋದಕ ಹೋಮ, ನವಗ್ರಹ ಹೋಮ ಮತ್ತು ಶನಿಶಾಂತಿ ಹೋಮಗಳು ನೆರವೇರಿದವು. ಶೃಂಗೇರಿ ಶಾರದಾ ಪೀಠದ ಋತ್ವಿಜರು ಹೋಮಗಳನ್ನು ನೆರವೇರಿಸಿ, ಅವುಗಳ ಮಹತ್ವ ವಿವರಿಸಿದರು.
ಪ್ರಥಮ ದಿನದ ಅಂಗವಾಗಿ ನವದುರ್ಗೆಯರಲ್ಲಿ ಪ್ರಥಮವಾಗಿ ಅವತರಿಸಿದ ಮಾತೆ ಶೈಲಪುತ್ರಿಯನ್ನು ಆರಾಧಿಸಲಾಯಿತು.
ಭೀಮನಕಟ್ಟೆ ಮಠದ ರಾಘವೇಂದ್ರ ತೀರ್ಥ ಸ್ವಾಮೀಜಿ, S-VYASA ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ರಾಮಚಂದ್ರ ಭಟ್ ಕೋಟೆಮನೆ, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್. ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.