
Sidlaghatta : ಶಿಡ್ಲಘಟ್ಟ ನಗರದ ರೇಣುಕಾ ಯಲ್ಲಮ್ಮದೇವಿಯ ಹಸಿ ಕರಗವು ಭಾನುವಾರ ರಾತ್ರಿ ಭಕ್ತಿಪೂರ್ವಕವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು.
ಯುಗಾದಿಯಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡ ಈ ಆಚರಣೆ ಆರು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ವಿಶೇಷವಾಗಿ, ಯುಗಾದಿಯ ದಿನ ರಾತ್ರಿ ಹಸಿಕರಗದ ರಚನೆ ಅತ್ಯಂತ ಸಂಪ್ರದಾಯಬದ್ಧ ಹಾಗೂ ಕಟ್ಟುನಿಟ್ಟಾದ ವಿಧಿಯಿಂದ ನೆರವೇರಿತು.
ಸಂಜೆ ವೇಳೆಗೆ ಕರಗ ಹೊರುವ ವ್ಯಕ್ತಿಗೆ ಪ್ರಥಮವಾಗಿ ವಪನ ಸಂಸ್ಕಾರವನ್ನು ನೆರವೇರಿಸಿ, ಕಂಕಣ ಕಟ್ಟಲಾಗುತ್ತದೆ. ನಂತರ ಕೈಯಲ್ಲಿ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆ ಜಡೆಕುಚ್ಚುಗಳಿಂದ ಅಲಂಕರಿಸಲಾಗುತ್ತದೆ. ಅರಿಶಿನ ಸೀರೆ ಮತ್ತು ಕುಪ್ಪಸ ಉಡಿಸಿ, ಆಭರಣಗಳಿಂದ ಸಿಂಗರಿಸಿದ ಈ ಕರಗಧಾರಿ ನವವಧುವಿನಂತೆ ಶೋಭಿಸುತ್ತಾರೆ.
ಆನಂತರ, ಶಕ್ತಿಸ್ವರೂಪನಾಗಿ ಪೂಜೆಗೆ ಭಾಜನರಾದ ಈ ಕರಗಧಾರಿಗೆ ಧೂಪ, ದೀಪ, ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತ ಪೂಜೆ ನಡೆಯಿತು. ತಲೆಗೆ ನಾಮ ಇಟ್ಟು, ನಡುಪಟ್ಟಿ ಧರಿಸಿದ ಕರಗಧಾರಿಯನ್ನು, ಕೈಯಲ್ಲಿ ಕತ್ತಿ ಹಿಡಿದ ವೀರಕುಮಾರರ ಬಳಗ ಭದ್ರವಾಗಿ ಕಾವಲು ಹಿಡಿದಂತೆ ದೇವಾಲಯದ ಒಳಗೆ ಕರೆತಂದರು. ಇದಾದ ಬಳಿಕ, ಅರಿಶಿನ, ಕುಂಕುಮ ಮತ್ತು ಅಚ್ಚಮಲ್ಲಿಗೆ ಹೂವಿನಿಂದ ಅಲಂಕರಿಸಲಾದ ಹಸಿಕರಗವನ್ನು ಗೋಪುರಾಕಾರದಲ್ಲಿ ಮಲ್ಲಿಗೆಯ ಹೂವಿನಿಂದ ಸಿಂಗಾರಿಸಲಾಯಿತು. ಕರಗದ ತುದಿಯಿಂದ ಇಳಿಬಂದ ಹೂಮಾಲೆ ಹೊರುವವರ ಭುಜಗಳೊಂದಿಗೆ ನಯವಾಗಿ ಹರಡಿಕೊಳ್ಳುವ ರೀತಿಯಲ್ಲಿ ಕಟ್ಟಲಾಗಿತ್ತು.
ಕರಗವನ್ನು ಹೊತ್ತ ನಂತರ ವಿಶೇಷ ಮಂಗಳಾರತಿ ನೆರವೇರಿಸಲಾಯಿತು. ಪುರೋಹಿತರು ಸ್ತುತಿಪದ್ಯಗಳನ್ನು ಪಠಿಸಿದರು. ವೀರಕುಮಾರರ ರಕ್ಷಣೆಯಲ್ಲಿ ಕರಗ ದೇವಾಲಯದ ಆವರಣ ತೊರೆದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತಾದಿಗಳು ದಾರಿಯುದ್ದಕ್ಕೂ ಪೂಜೆ ಸಲ್ಲಿಸಿದರು. ಬೆಳಗಿನ ಜಾವ ಈ ದಿವ್ಯ ಕರಗ ಮರುಕಳಿಸಿ ಗರ್ಭಗುಡಿಯೊಳಗೆ ಪ್ರವೇಶಿಸಿತು.
ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರದಿಂದ ಉತ್ಸವದ ಭವ್ಯತೆ ಹೆಚ್ಚಿಸಲಾಗಿತ್ತು. ಈ ಬಗೆಯ ಸಂಪ್ರದಾಯಬದ್ಧ ಮತ್ತು ಭಕ್ತಿಪೂರ್ಣ ಹಸಿ ಕರಗ ಉತ್ಸವ ನಗರದ ಜನತೆಗೆ ಆಧ್ಯಾತ್ಮಿಕ ಶಾಂತಿ ಮತ್ತು ಸಂಭ್ರಮವನ್ನು ತಂದುಕೊಟ್ಟಿತು.