Sidlaghatta : ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದ (Bus Stand) ಬಳಿಯ ವೆಂಕಟೇಶ್ವರ ಚಿತ್ರಮಂದಿರದ (Sri Venkateshwara Cinemas) ಪಕ್ಕದ ನೂತನ ಕಟ್ಟಡಕ್ಕೆ (New Building) ಸ್ಥಳಾಂತರಗೊಂಡ SBI Bank ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆ ಹನುಮಂತಪ್ಪ ಅವರು ಮಾತನಾಡಿದರು.
ಬದಲಾವಣೆ ಜಗದ ನಿಯಮ. ಅದರಂತೆ ಎಸ್.ಬಿ.ಐ ಬ್ಯಾಂಕ್ ಕೂಡ ಗ್ರಾಹಕರಿಗೆ ಅಗತ್ಯ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಸ್ಥಳ, ರೂಪ ಮತ್ತು ಗ್ರಾಹಕ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತಿದೆ. ಬ್ಯಾಂಕಿಗೆ ಬರದೇ ದೂರವುಳಿದವರನ್ನು ತನ್ನ ಹತ್ತಿರಕ್ಕೆ ಸೆಳೆದು, ಪರಸ್ಪರ ಪೂರಕ ಅಭಿವೃದ್ಧಿಯೆಡೆಗೆ ಸಾಗಬೇಕು. ಈಗ ಇರುವ ಬ್ಯಾಂಕಿನ ಗ್ರಾಹಕರ ಸಂಖ್ಯೆ ದ್ವಿಗುಣ ಮತ್ತು ತ್ರಿಗುಣಗೊಳ್ಳಬೇಕು. ಜನಸಾಮಾನ್ಯರಿಗೆ ಬ್ಯಾಂಕಿನ ಬಗ್ಗೆ ಅರಿವು ಮೂಡಿಸಿ, ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು. ಆಗ ಬ್ಯಾಂಕ್ ಮತ್ತು ಒಟ್ಟಾರೆ ತಾಲ್ಲೂಕು ಆರ್ಥಿಕವಾಗಿ ಮುಂದೆ ಸಾಗುತ್ತದೆ ಎಂದರು.
ಎಸ್.ಬಿ.ಐ ಪ್ರಾದೇಶಿಕ ವ್ಯವಸ್ಥಾಪಕ ಅಮೋದ್ ಶಶಿಕಾಂತ್ ಜಹಗೀರ್ದಾರ್ ಮಾತನಾಡಿ, ಎಸ್.ಬಿ.ಐ ದೇಶದ ಅತಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿದ್ದು, 45 ಕೋಟಿ ಗ್ರಾಹಕರನ್ನು ಹೊಂದಿದೆ. ದೇಶದಾದ್ಯಂತ 22 ಸಾವಿರ ಶಾಖೆಗಳಿದ್ದು, ಗ್ರಾಹಕ ಸ್ನೇಹಿಯಾಗಿ ಪಾರದರ್ಶಕಗಿರುವುದಲ್ಲದೆ ಉತ್ತಮ ಸೇವೆ ನೀಡುತ್ತಿದೆ. ನಮ್ಮಲ್ಲಿ ಎರಡೂವರೆ ಲಕ್ಷ ಮಂದಿ ಉದ್ಯೋಗಿಗಳಿರುವರು. ಶಿಡ್ಲಘಟ್ಟದ ಶಾಖೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರಿದ್ದು, 148 ಕೋಟಿ ರೂಗಳಿಗೂ ಹೆಚ್ಚು ವ್ಯವಹಾರ ನಡೆಯುತ್ತದೆ. ಶಿಡ್ಲಘಟ್ಟದಲ್ಲಿ ಶಾಖೆ ಸ್ಥಳ ಬದಲಾವಣೆಯೊಂದಿಗೆ ನಮ್ಮ ಸೇವಾ ಕಾರ್ಯವನ್ನು ವಿಸ್ತರಿಸಲು ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೇಶನ ಹಾಗೂ ಕಟ್ಟಡದ ಮಾಲೀಕ ಪ್ರಕಾಶ್ ಅವರನ್ನು ಗೌರವಿಸಲಾಯಿತು. ಅಪರ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಅಲ್ಬೂರ್, ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ಹಿರಿಯ ವಕೀಲ ಎಂ.ಪಾಪಿರೆಡ್ಡಿ, ನಗರಸಭೆ ಪೌರಾಯುಕ್ತ ಶ್ರೀಕಾಂತ್, ರೆಡ್ ಕ್ರಾಸ್ ಸಂಸ್ಥೆಯ ಎನ್.ಕೆ.ಗುರುರಾಜರಾವ್, ಸಿಡಿಪಿಒ ನವತಾಜ್ ಹಾಜರಿದ್ದರು.