Sidlaghatta : ಕೇಂದ್ರದ ಏರ್ ಕಮೋಡೋರ್ ಸುಧೀರ್ ಯಾದವ್ ಮತ್ತವರ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು ಶಿಡ್ಲಘಟ್ಟದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ಆನೂರು ಗ್ರಾಮದ ಮಾದರಿ ಅಂಗನವಾಡಿ, ಡಿಜಿಟಲ್ ಲೈಬ್ರರಿಗೆ ಭೇಟಿ ನೀಡಿದ್ದರು.
ರೇಷ್ಮೆಗೂಡು ಮಾರುಕಟ್ಟೆಯಲ್ಲಿನ ಇ-ಹರಾಜು, ಇ-ತೂಕ ಹಾಗೂ ಇ-ಬಟವಾಡೆ ವ್ಯವಸ್ಥೆ, ಮಾದರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಿಗುವ ಸವಲತ್ತುಗಳು, ಡಿಜಿಟಲ್ ಲೈಬ್ರರಿಯಲ್ಲಿನ ಓದುಗರಿಗೆ ಸಿಗುತ್ತಿರುವ ಅನುಕೂಲಗಳ ಕುರಿತು ಮಾಹಿತಿ ಪಡೆದರು.
ಕೇಂದ್ರ ಸರ್ಕಾರಕ್ಕೆ ಜಿಲ್ಲಾ ಮಟ್ಟದ ಆಡಳಿತ ವರದಿ ನೀಡಲು ಆಗಮಿಸಿದ್ದ ತಂಡಕ್ಕೆ ಇಲ್ಲಿನ ಮಾರುಕಟ್ಟೆಯಲ್ಲಿನ ಇ-ಆಡಳಿತ ವ್ಯವಸ್ಥೆ ಕುರಿತು ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಅವರು ಅಗತ್ಯ ದಾಖಲೆಗಳೊಂದಿಗೆ ಮಾಹಿತಿಯನ್ನು ನೀಡಿದರು.
ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗುವ ರೇಷ್ಮೆಗೂಡಿನ ಪ್ರಮಾಣಕ್ಕೆ ತಕ್ಕಂತೆ ಜಾಲರಿಗಳನ್ನು ನೀಡಿ ಪ್ರತಿ ಲಾಟಿಗೂ ಸರಣಿ ಕ್ರಮ ಸಂಖ್ಯೆಯನ್ನು ನೀಡಲಾಗುತ್ತದೆ. ಇ-ಹರಾಜು ಮೂಲಕ ರೀಲರುಗಳು ತಮಗೆ ಬೇಕಾಗುವ ರೇಷ್ಮೆಗೂಡಿಗೆ ಬಿಡ್ ನೀಡುತ್ತಾರೆ. ಯಾರು ಹೆಚ್ಚಿನ ಬಿಡ್ ನೀಡುತ್ತಾರೋ ಅವರಿಗೆ ಆ ರೇಷ್ಮೆಗೂಡು ಲಾಟು ಸಿಗುತ್ತದೆ. ಒಂದೊಮ್ಮೆ ರೈತನಿಗೆ ಬಿಡ್ ನ ಬೆಲೆ ಸಮಾಧಾನ ತರದಿದ್ದಲ್ಲಿ ಬಿಡ್ ಅನ್ನು ರದ್ದುಪಡಿಸುವ ಅವಕಾಶ ರೈತನಿಗಿದೆ ಎಂದರು.
ಮೊದಲ ಸುತ್ತಿನ ಬಿಡ್ ನಲ್ಲಿ ಹರಾಜು ಆಗದೆ ಉಳಿದ ರೇಷ್ಮೆಗೂಡಿಗೆ ಎರಡನೇ ಬಾರಿ ಹರಾಜಿಗೆ ಅವಕಾಶ ನೀಡಲಾಗುವುದು. ಎರಡು ಬಾರಿಯ ಹರಾಜಿನಲ್ಲಿಯೂ ರೈತನಿಗೆ ಬೆಲೆ ಸಮಾಧಾನವಾಗದಿದ್ದಲ್ಲಿ ಮರು ದಿನದ ಬಿಡ್ ಗೆ ಕಾಯಬಹುದು ಅಥವಾ ಬೇರೆ ರೇಷ್ಮೆಗೂಡು ಮಾರುಕಟ್ಟೆಗೆ ಹೋಗಲು ಮುಕ್ತ ಅವಕಾಶ ನೀಡಲಾಗುವುದು.
ಹರಾಜು ಪ್ರಕ್ರಿಯೆ ಮುಗಿದಾದ ಮೇಲೆ ಎಲೆಕ್ಟ್ರಾನಿಕ್ ಯಂತ್ರಗಳಲ್ಲಿ ರೇಷ್ಮೆಗೂಡಿನ ನಿಖರ ತೂಕ ಮಾಡಲಾಗುತ್ತದೆ. ಹರಾಜು ಮುಗಿದ 24 ಗಂಟೆಗಳ ಒಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು. ಇದರಿಂದ ರೇಷ್ಮೆಗೂಡಿನ ಗುಣಮಟ್ಟದ ಆಧಾರದಲ್ಲಿ ರೈತರಿಗೆ ಬೆಲೆ ಸಿಗಲಿದೆ. ತಮಗೆ ಬೇಕಾದ ಗುಣಮಟ್ಟದ ರೇಷ್ಮೆಗೂಡು ರೀಲರುಗಳಿಗೆ ಸಿಗಲಿದೆ ಎಂದು ವಿವರಿಸಿದರು.
ಆನೂರಿನ ಮಾದರಿ ಅಂಗನವಾಡಿ, ಡಿಜಿಟಲ್ ಗ್ರಂಥಾಲಯವನ್ನು ವೀಕ್ಷಿಸಿದ ಸುಧೀರ್ ಯಾದವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯವಾಗಿ ಜಿಲ್ಲೆಯಲ್ಲಿ ಅಂತರ್ಜಲ ಮರುಪೂರ್ಣಕ್ಕಾಗಿ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಇತರೆ ಕಡೆಯೂ ಇದೆ ಮಾದರಿಯ ಕ್ರಮಗಳನ್ನು ಅನುಸರಿಸಲು ಸೂಚಿಸುವುದಾಗಿ ತಿಳಿಸಿದರು.
ಆದರೆ ಘನ ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗದ ಬಗ್ಗೆ ಬೇಸರ ವ್ಯಕ್ತಪಡಿಸಿ, ಆಯಾ ದಿನವೇ ಘನ ತ್ಯಾಜ್ಯ ವಿಲೇವಾರಿ ಆಗುವಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಭೂಮಿ, ನರೇಗ, ಸಕಾಲ, ಸ್ವಚ್ಚ ಭಾರತ್ ಯೋಜನೆ, ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳು, ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಪ್ರಮುಖ ಅಭಿವೃದ್ದಿ ಕಾರ್ಯಗಳ ಯೋಜನೆಗಳನ್ನು ವೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರ್ ಬಿ.ಕೆ.ಶ್ವೇತ, ಜಿಲ್ಲಾ ಪಂಚಾಯಿತಿ ನರೇಗಾ ಸಂಯೋಜಕ ಜಿ.ಎನ್.ಮಧು ಹಾಜರಿದ್ದರು.