Home Sidlaghatta ವಿಚ್ಚೇಧಿತ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪತಿ

ವಿಚ್ಚೇಧಿತ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪತಿ

0

Sonnenahalli, Sidlaghatta : ಸಂಸಾರದಲ್ಲಿ ನಡೆದ ಗಲಾಟೆ, ಜಗಳದಿಂದ ವಿಚ್ಚೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯನ್ನು ಆಕೆಯ ಪತಿ ಮತ್ತು ಆತನ ಮತ್ತೋರ್ವ ಪತ್ನಿಯ ಪುತ್ರ ಸೇರಿಕೊಂಡು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

45 ವರ್ಷದ ಪದ್ಮಮ್ಮ ಕೊಲೆಯಾದ ದುರ್ದೈವಿ. ಮೃತಳ ಪತಿ 58 ವರ್ಷದ ಮುನಿರೆಡ್ಡಿ ಕೊಲೆ ಮಾಡಿದ ನಂತರ ಸ್ವತಃ ಪೊಲೀಸರಿಗೆ ಶರಣಾಗಿದ್ದರೆ, ಕೊಲೆಯಲ್ಲಿ ಭಾಗಿಯಾದ ಮುನಿರೆಡ್ಡಿಯ ಮತ್ತೋರ್ವ ಪತ್ನಿಯ ಪುತ್ರ 20 ವರ್ಷದ ಗಿರೀಶ್ ತಲೆ ಮರೆಸಿಕೊಂಡಿದ್ದಾನೆ.

ಶಿಡ್ಲಘಟ್ಟ ತಾಲ್ಲೂಕು ಸೊಣ್ಣೇನಹಳ್ಳಿ ಗ್ರಾಮದ ಮುನಿರೆಡ್ಡಿ ಮತ್ತು ಪದ್ಮಮ್ಮಳ ನಡುವೆ ಸಂಸಾರದಲ್ಲಿ ನಡೆದ ಗಲಾಟೆ, ಜಗಳದಿಂದ ವಿಚ್ಚೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪದ್ಮಮ್ಮಗೆ ಇಬ್ಬರು ಪುತ್ರರಿದ್ದರೂ ಇಬ್ಬರೂ ಪುತ್ರರೂ ಪ್ರತ್ಯೇಕ ಅಪಘಾತಗಳಲ್ಲಿ ಈಗಾಗಲೆ ಮೃತಪಟ್ಟಿದ್ದು ಒಬ್ಬಂಟಿಯಾಗಿ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದಳು.

ಈ ಕಡೆ ಮುನಿರೆಡ್ಡಿ ಪದ್ಮಮ್ಮಳಿಂದ ವಿಚ್ಛೇದನ ಪಡೆದು ಮತ್ತೊಂದು ಮದುವೆಯಾಗಿದ್ದು ಒಂದು ಹೆಣ್ಣು ಒಂದು ಗಂಡು ಮಗು ಇದೆ. ಈ ಮದ್ಯೆ ಪದ್ಮಮ್ಮಳಿಗೆ ಜೀವನಾಂಶಕ್ಕಾಗಿ ನೀಡಿದ ಜಮೀನನ್ನು ವಾಪಸ್ ಮಾಡುವಂತೆ ಮುನಿರೆಡ್ಡಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ.
ನಿನಗೆ ಮಕ್ಕಳಿಲ್ಲವಲ್ಲ ಜಮೀನು ಇಟ್ಟುಕೊಂಡು ಏನು ಮಾಡ್ತೀಯಾ ಎಂದು ಜಮೀನು ವಾಪಸ್ ಮಾಡು ಎಂದು ಆಗಾಗ್ಗೆ ಪೀಡಿಸುತ್ತಿದ್ದು ಇದು ಪದ್ಮಮ್ಮ ಮತ್ತು ಮುನಿರೆಡ್ಡಿ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.

ಮುನಿರೆಡ್ಡಿ ಹಾಗೂ ಆತನ ಮಗ ಗಿರೀಶ್ ಬೆಳಗ್ಗೆಯೆ ಪದ್ಮಮ್ಮಳ ಮನೆಗೆ ತೆರಳಿದ್ದು ಶೌಚ ಕಾರ್ಯ ಮುಗಿಸಿ ಮನೆಯೊಳಗೆ ಬಂದ ಪದ್ಮಮ್ಮಳ ಮೇಲೆ ಏಕಾ ಏಕಿ ಮಚ್ಚಿನಿಂದ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪದ್ಮಮ್ಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.

ಘಟನೆ ನಂತರ ಗಿರೀಶ್ ತಲೆ ಮರೆಸಿಕೊಂಡಿದ್ದು ಮುನಿರೆಡ್ಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ತೆರಳಿ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ. ಅಲ್ಲಿಂದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಆರೋಪಿ ಮುನಿರೆಡ್ಡಿಯನ್ನು ಕರೆ ತರಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಎಂ.ಶ್ರೀನಿವಾಸ್, ಗ್ರಾಮಾಂತರ ಠಾಣೆಯ ಎಸ್.ಐ ಸತೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲಿಸಿದೆ. ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಸ್ಪಿ ಡಿ.ಎಲ್.ನಾಗೇಶ್, ಎಎಸ್ಪಿ ರಾಜ ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮುಂದಿನ ಕ್ರಮಕ್ಕೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version