Sidlaghatta : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನಗರದ ನಗರಸಭೆ (City Municipal Council – CMC) ಸಭಾಂಗಣದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ (Street Vendors) ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು (Workshop) ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಕೇಂದ್ರ ಸರ್ಕಾರದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಅನೇಕ ಸೌಲಭ್ಯ ಕಲ್ಪಿಸಿದ್ದು, ವ್ಯಾಪಾರಿಗಳು ಸದುಪಯೋಗ ಪಡಿಸಿಕೊಂಡು ಬೀದಿಬದಿ ವ್ಯಾಪಾರಿಗಳು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು. ವ್ಯಾಪಾರಸ್ಥರು ಸದಾ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿ ಇದ್ದು ನಗರಸಭೆಯಿಂದ ಸಿಗುವ ಸೌಲಭ್ಯ ಪಡೆಯಿರಿ. ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತಂದರೆ ಶೀಘ್ರವೇ ಬಗೆಹರಿಸಲಾಗುವುದು ಎಂದು ಹೇಳಿದರು.
ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಇಲಾಖೆಯ ಅಧಿಕಾರಿ ವೆಂಕಟಾಚಲಪತಿ ಮಾತನಾಡಿ, ಬೀದಿಬದಿ ಮತ್ತು ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ವಿವಿಧ ಯೋಜನೆಗಳನ್ನು ಡೇ-ನಲ್ಮ್ ಯೋಜನೆಯಡಿ ಅನುಷ್ಠಾನಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಸಣ್ಣ ವ್ಯಾಪಾರಸ್ಥರು ಜಾಗೃತರಾಗಿ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಬೇಕು. ನೂತನವಾಗಿ ಜಾರಿಗೆ ತಂದಿರುವ ಬೀದಿಬದಿ ವ್ಯಾಪಾರಿಗಳ ರಕ್ಷಣೆ ಮತ್ತು ಕಾಯ್ದೆಯಡಿ ವ್ಯಾಪಾರಿಗಳು ವ್ಯಾಪಾರ ಸಮಿತಿ ರಚಿಸಿಕೊಂಡು ವ್ಯಾಪಾರಿಗಳು ನಗರಸಭೆಗೆ ದಾಖಲಾತಿ ನೀಡಿ ಗುರುತಿನ ಚೀಟಿ ಪಡೆದು ಸರ್ಕಾರ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಬೀದಿ ವ್ಯಾಪಾರಸ್ಥರಿಗೆಂದೇ ವ್ಯಾಪಾರದ ಸುರಕ್ಷಿತ ಸ್ಥಳವನ್ನು ಸಂತೆ ಮೈದಾನದಲ್ಲಿ ರೂಪಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಅದನ್ನು ನಿಮ್ಮ ಸುಪರ್ಧಿಗೆ ನೀಡಲಾಗುವುದು ಎಂದರು.
ವಕೀಲ ವಿಶ್ವನಾಥ್ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಸಂಬಂಧಿಸಿದ ಕಾನೂನಿನ ಬಗ್ಗೆ ವಿವರಿಸಿದರು.
ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಕೆ.ಎಂ.ಸುಧಾ, ಬೀದಿಬದಿ ವ್ಯಾಪಾರಿಗಳ ತಾಲ್ಲೂಕು ಸಂಘದ ಅಧ್ಯಕ್ಷ ಶ್ರೀಧರ್, ಇಲಿಯಾಜ್, ಲಕ್ಷ್ಮೀದೇವಿ ಹಾಜರಿದ್ದರು.