Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ (Jangamakote Governement High School) ಗುರುವಾರ ಸ್ಟೂಡೆಂಟ್ ಪೊಲೀಸ್ ಕೆಡೆಟ್ (Student Police Cadet) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗಳಾದ ಸತೀಶ್ ಮತ್ತು ಕೃಷ್ಣಪ್ಪ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಸೌಜನ್ಯ, ಮುಖ್ಯ ಪೇದೆ ರಾಘವೇಂದ್ರ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೋಲಿಸ್ ವ್ಯವಸ್ಥೆಯ ಪರಿಚಯ, ಅಪರಾಧಗಳು, ಸಮಾಜ ಘಾತುಕ ಕೃತ್ಯಗಳು ಮತ್ತು ಮಾದಕ ವಸ್ತುಗಳನ್ನು ದೂರವಿಡುವ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸಿದರು .
ಸಬ್ ಇನ್ಸ್ ಪೆಕ್ಟರ್ ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಅಪರಾಧಗಳ ಬಗ್ಗೆ ಜ್ಞಾನವನ್ನು ಪಡೆದು ಸಮಾಜ ಘಾತುಕ ಕಾರ್ಯಗಳಿಂದ ದೂರವಿರಬೇಕು. ತಮ್ಮ ಮೇಲೆ ಸಮುದಾಯದಲ್ಲಿ ಉಂಟಾಗಬಹುದಾದ ದೌರ್ಜನ್ಯಗಳನ್ನು ದಿಟ್ಟತನದಿಂದ ಎದುರಿಸುವುದು ಹಾಗೂ ಪೊಲೀಸ್ ರಕ್ಷಣೆಯನ್ನು ಪಡೆಯಲು ಯಾರೂ ಸಹ ಹಿಂಜರಿಯಬಾರದೆಂದು ತಿಳಿಸಿದರು.
ಸಹ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸೌಜನ್ಯ ಮಾತನಾಡಿ ಪ್ರೌಢಶಾಲಾ ಹಂತದಿಂದಲೇ ಮಾದಕವಸ್ತುಗಳ ಚಟದಿಂದ ದೂರವಿರಬೇಕು ಹಾಗೂ ತಮ್ಮ ಮನೆ ಹಾಗೂ ಸಮುದಾಯದಲ್ಲಿ ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಲು ಜನರಲ್ಲಿ ಹಾಗೂ ತಮ್ಮ ಕುಟುಂಬಗಳಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.
ಮುಖ್ಯಪೇದೆ ರಾಘವೇಂದ್ರರವರು ಅಪರಾಧಗಳ ವಿಧಗಳು ಮತ್ತು ಅವುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ, ಶಿಕ್ಷಕಿಯರಾದ ನಾಗರತ್ನ, ಲತಾ, ಮೇಘಾ ಜ್ಯೋಶಿ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.