Sidlaghatta : ಕರ್ನಾಟಕ ರಾಜ್ಯ ಸ್ಥಾಪನೆಯಾಗಿ 70 ವರ್ಷಗಳಾದರೂ ನಾಡು, ನುಡಿ, ಜಲ ರಕ್ಷಣೆಗಾಗಿ ಹೋರಾಟಗಳನ್ನು ಮುಂದುವರಿಸುವ ಪರಿಸ್ಥಿತಿ ಇರುವುದನ್ನು ದುಃಖಕರ ಎಂದು ಸಮ್ಮೇಳನಾಧ್ಯಕ್ಷ ರೂಪಸಿ ರಮೇಶ್ ಅಭಿಪ್ರಾಯಪಟ್ಟರು.
ನಗರದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಕನ್ನಡ ಭಾಷಾ ಕಲಿಕೆ ಮನೆಯಿಂದಲೇ ಆರಂಭವಾಗಬೇಕು. ಶಾಲೆಯಲ್ಲಿ ಮಕ್ಕಳಿಗೆ ಆಂಗ್ಲಭಾಷೆ ಕಲಿಸಿದರೂ, ಮನೆ ಎಂದೇ ಮೊದಲ ಪಾಠಶಾಲೆ ಎಂಬ ನಂಬಿಕೆಯೊಂದಿಗೆ ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಿದರೆ ಅನೇಕ ಸಮಸ್ಯೆಗಳು ನಿವಾರಣೆಯಾಗಬಹುದು,” ಎಂದು ಅವರು ಹೇಳಿದರು.
“ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಶಿಕ್ಷಣ ಸೇರಿದಂತೆ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ನಿವೃತ್ತಿಯ ಹಂತದಲ್ಲಿರುವ ಹೋರಾಟಗಾರರಿಗೆ ವಿಶ್ರಾಂತಿ ವೇತನ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಈ ಸಂದರ್ಭ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಂತೆ ನಾರಾಯಣಸ್ವಾಮಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷ ರೂಪಸಿ ರಮೇಶ್ ಅವರಿಗೆ ಹಸ್ತಾಂತರಿಸಿದರು. ಶಾಸಕ ಬಿ.ಎನ್. ರವಿಕುಮಾರ್ ಸಮ್ಮೇಳನಾಧ್ಯಕ್ಷರ ಭಾಷಣದ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್. ರವಿಕುಮಾರ್, ತಹಸೀಲ್ದಾರ್ ಬಿ.ಎನ್. ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರಕುಮಾರ್, ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ತಾ.ಪಂ ಮಾಜಿ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ಮಾಜಿ ಅಧ್ಯಕ್ಷ ಎ.ಎಂ. ತ್ಯಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದರು.