Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಆರ್.ಲತಾ (DC R Latha) ಭೇಟಿ ನೀಡಿ ತಾಲ್ಲೂಕು ಕಚೇರಿಯ ಸಮಸ್ಯೆಗಳು, ಆಡಳಿತದ ಕಾರ್ಯ ವೈಖರಿಯ ಪ್ರಗತಿ ಪರಿಶೀಲನೆ ಮಾಡಿದರು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯ ಹೃದಯ ಭಾಗವಾದ ಆರ್.ಆರ್.ಟಿ ವಿಭಾಗದ ಕಡತಗಳನ್ನು ಪರೀಶಿಲಿಸಿ ಅದನ್ನು ಸರಿಯಾಗಿ ಇಟ್ಟುಕೊಳ್ಳಬೇಕೆಂದು ಸಿಬ್ಬಂದಿಗೆ ತಾಕೀತು ಮಾಡಿದರು.
ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ ಸಮಸ್ಯೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ತಾಲ್ಲೂಕು ಆಡಳಿತದಲ್ಲಿನ ಸಿಬ್ಬಂದಿಯ ಕೊರತೆ, ಸಾರ್ವಜನಿಕರಿಗೆ ಒದಗಿಸುವ ಸೇವೆ, ಜನರ ಕುಂದು ಕೊರತೆಗಳನ್ನು, ಆಡಳಿತದ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಿ ಅದರ ಸುಧಾರಣೆಗೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆಗಳನ್ನು ನೀಡಿದರು.
ತಾಲ್ಲೂಕಿನ ಬಶೆಟ್ಟಿಹಳ್ಳಿ ಹೋಬಳಿಯಲ್ಲಿ ಮನೆ ಮತ್ತು ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಅತಿವೃಷ್ಟಿ ಹಾಗೂ ಬೆಳೆನಷ್ಟ ಪರಿಹಾರವನ್ನು ನೀಡುವಂತೆ ರೈತಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ತಮ್ಮ ಬೇಡಿಕೆಯ ಕುರಿತು ಪರಿಶೀಲಿಸಿ ಶೀಘ್ರದಲ್ಲೇ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದರು.
ನಂತರ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸಂಧ್ಯಾ ಸುರಕ್ಷಾ ಯೋಜನೆಯಡಿಯ ಮಾಸಾಶನ, ಆಧಾರ್ ನೋಂದಣಿ, ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಕಚೇರಿಯ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು.
ಈ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಮೀನು ಮಂಜೂರು ಮಾಡಿದ ಸಲುವಾಗಿ ದಲಿತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿದರು. ಗೌಡಕೆರೆಯಲ್ಲಿ ವ್ಯಾಪಕವಾಗಿ ಬೆಳೆದಿರುವ ಜಾಲಿ ಮರಗಳನ್ನು ತೆರೆವುಗೊಳಿಸಲು ಸ್ಥಳೀಯರು ಹಾಗೂ ರೈತ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲ್ಲೂಕು ತಹಶೀಲ್ದಾರ್ ಬಿ.ಎಸ್.ರಾಜೀವ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.