Sidlaghatta : ಬಾಕಿ ಇದ್ದ ವಿದ್ಯುತ್ ಬಿಲ್ಲಿನ ಹಣವನ್ನು ಪಾವತಿಸದ ಹಿನ್ನಲೆಯಲ್ಲಿ ತಾಲ್ಲೂಕು ಕಚೇರಿ (Taluk Office) ಹಾಗೂ ಕಂದಾಯ ಭವನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನು ಗುರುವಾರ ಕಡಿತಗೊಳಿಸಲಾಗಿದೆ.
ಸುಮಾರು 4 ಲಕ್ಷ ರೂ. ವಿದ್ಯುತ್ ಬಿಲ್ಲು ಬಾಕಿಯಿದ್ದು, ಬೆಸ್ಕಾಂನವರು ವಿದ್ಯುತ್ ಸಂಪರ್ಕ ತೆಗೆದು ಹಾಕಿದ್ದರಿಂದ ತಾಲ್ಲೂಕು ಕಚೇರಿಯಲ್ಲಿನ ಬಹುತೇಕ ಎಲ್ಲ ಕೆಲಸ ಕಾರ‍್ಯಗಳು ಸ್ಥಗಿತಗೊಂಡು ಸಾರ್ವಜನಿಕರು ದಿನವಿಡಿ ಪರದಾಡುವಂತಾಯಿತು.
ಕಂದಾಯ ಭವನದಲ್ಲಿ ಆಧಾರ್ ನೋಂದಣಿ ಕೇಂದ್ರವಿದ್ದು, ಆಧಾರ್ ಕಾರ್ಡು ನೋಂದಣಿ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಇನ್ನಿತರೆ ತಿದ್ದುಪಡಿಗಳಿಗಾಗಿ ಬಂದಿದ್ದ ಸಾರ್ವಜನಿಕರು ಬರಿಗೈಲಿ ವಾಪಸ್ ಹೋಗುವಂತಾಯಿತು.
ಇನ್ನು ತಾಲ್ಲೂಕು ಕಚೇರಿಯಲ್ಲಿ ಭೂಮಿ, ಸಕಾಲ, ಉಪ ನೋಂದಣಿ ಕಚೇರಿ, ಜನಸ್ನೇಹಿ ಕೇಂದ್ರ ಸೇರಿದಂತೆ ಅನೇಕ ಶಾಖೆಗಳು ವಿದ್ಯುತ್ ಇಲ್ಲದೆ ಕಾರ‍್ಯನಿರ್ವಹಿಸಲಿಲ್ಲ. ಬಾಕಿ ಬಿಲ್ಲು ಹಣ ಪಾವತಿ ಮಾಡದೆ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದರೆ, ಸರ್ಕಾರದಿಂದ ಹಣ ಬಂದರೆ ಪಾವತಿಸುತ್ತೇವೆಂದು ತಹಶೀಲ್ದಾರರು ಉತ್ತರಿಸಿದರು.
ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬಂದ ಸಿಬ್ಬಂದಿಗೆ, ನಮ್ಮ ಕಂದಾಯ ಜಮೀನುಗಳಲ್ಲಿ ನೀವು ಅಳವಡಿಸಿದ ವಿದ್ಯುತ್ ಕಂಬಗಳಿಗೆ ಬಾಡಿಗೆ ಹಣ ನೀಡುವುದಿಲ್ಲ, ನಾವು ನಿಮ್ಮನ್ನು ಕೇಳುವುದೂ ಇಲ್ಲ. ಆದರೆ ನೀವು ವಿದ್ಯುತ್ ಕಟ್ ಮಾಡಿದರೆ ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ ಎಂದು ತಹಶೀಲ್ದಾರರು ಪ್ರಶ್ನಿಸಿದರು.
ಬೆಸ್ಕಾಂ ಸಿಬ್ಬಂದಿಯು ನಮ್ಮದೇನಿದೆ ಸಾರ್ ನಮ್ಮ ಹಿರಿಯ ಅಧಿಕಾರಿಗಳು ಹೇಳಿದಂತೆ ನಾವು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ಇವರಿಬ್ಬರ ನಡುವೆ ಸಾರ್ವಜನಿಕರು ತಾವು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ತಾಲ್ಲೂಕು ಕಚೇರಿಯಲ್ಲಿ ಕೆಲಸ ಕಾರ‍್ಯಗಳಿಗಾಗಿ ಬಂದಿದ್ದವರು ಕಾದು ಕಾದು ಬರಿಗೈಲಿ ವಾಪಸ್ಸಾದರು.
ಸರ್ಕಾರದಿಂದ ವಿದ್ಯುತ್ ಬಿಲ್ಲು ಬಾಬ್ತು 3 ಲಕ್ಷ ಹಣ ಶೀಘ್ರದಲ್ಲಿ ಬರಲಿದೆ. ಬಂದ ತಕ್ಷಣ ಪಾವತಿಸುತ್ತೇವೆ. ಸರ್ಕಾರದಿಂದ ಹಣ ಬರದೆ ನಾವು ಬೇರೆ ಯಾವುದೆ ಖಾತೆಯಿಂದಲೂ ಹಣ ಪಾವತಿಸಲು ಆಗುವುದಿಲ್ಲ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ವಿದ್ಯುತ್ ಬಿಲ್ ಹಣ ಕಟ್ಟದೆ ಬಾಕಿಯಿದ್ದು ಡಿಸಿ ಅವರು ಸರ್ಕಾರಕ್ಕೆ ತಲಾ 3 ಲಕ್ಷ ಬಿಡುಗಡೆಗೆ ಪತ್ರ ಬರೆದಿದ್ದಾರೆ.
-ಬಿ.ಎಸ್.ರಾಜೀವ್, ತಹಶೀಲ್ದಾರ್, ಶಿಡ್ಲಘಟ್ಟ