Sidlaghatta : ಶೈಕ್ಷಣಿಕವಾಗಿ ಮುಂದುವರೆದರೆ ಮಾತ್ರ ಕ್ಷೇತ್ರವು ಅಭಿವೃದ್ಧಿ ಹೊಂದಲು ಸಾಧ್ಯ. ಶಿಡ್ಲಘಟ್ಟ ತಾಲ್ಲೂಕನ್ನು ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯದಲ್ಲಿ ಶಿಕ್ಷಕರು ನೆರವಾಗಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಹೊರವಲಯದ ಹಂಡಿಗನಾಳದ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸರ್ಕಾರಿ ಶಿಕ್ಷಕರೂ ಖಾಸಗಿ ಶಾಲೆಗೆ ಹೋಗುತ್ತಿರುವ ಕನಿಷ್ಠ ಹತ್ತು ಮಕ್ಕಳ ಪೋಷಕರ ಮನವೊಲಿಸಿ ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಬಗೆಹರಿಸಲು ನಾನು ಬದ್ಧನಾಗಿದ್ದೇನೆ. ನಮ್ಮ ಶಿಡ್ಲಘಟ್ಟ ಕ್ಷೇತ್ರ ಶೈಕ್ಷಣಿಕವಾಗಿ ಮುಂದುವರೆಯಲು ಮತ್ತು ನಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಲು ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದರು.
ತಾಲ್ಲುಕು ಪಂಚಾಯಿತಿ ಇಒ ಮುನಿರಾಜ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು. ಖಾಸಗೀಕರಣದತ್ತ ಶಿಕ್ಷಣ ಕ್ಷೇತ್ರ ಮುನ್ನಡೆಯದಂತೆ ತಡೆಯಬೇಕಿದೆ. ಶಿಕ್ಷಕರು ಉತ್ತಮ ಅಭ್ಯಾಸನಿರತರಾಗಬೇಕು ಮತ್ತು ಅಧ್ಯಯನಶೀಲರಾಗಬೇಕು. ನಿಮ್ಮನ್ನು ನೋಡಿ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಉತ್ತಮ ಶಿಕ್ಷಕ ವೃಂದವಿದ್ದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗುತ್ತಾರೆ. ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡ್. ಉತ್ತಮ ನಡವಳಿಕೆಗಳು ಹಾಗೂ ಮೌಲ್ಯಗಳು ಮಕ್ಕಳ ಮನದಲ್ಲಿ ಬೇರೂರುವಂತೆ ಮಾಡಬೇಕಿದೆ ಎಂದು ಹೇಳಿದರು.
ಗುಡಿಬಂಡೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಶ್ ಮುಖ್ಯ ಭಾಷಣಕಾರರಾಗಿ ಡಾ.ರಾಧಾಕೃಷ್ಣನ್ ಅವರ ಬದುಕು, ಶಿಕ್ಷಕ ವೃತ್ತಿ ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಿದರು.
ಪ್ರಾಥಮಿಕ, ಪ್ರೌಢಶಾಲೆ ಮತ್ತು ಅನುದಾನಿತ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ 30 ಕ್ಕೂ ಹೆಚ್ಚು ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮೂವರು ಶಿಕ್ಷಕರನ್ನು ಹಾಗೂ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಶಿಕ್ಷಕರ ತಂಡದ ತಂಬಾಣಿ ನೃತ್ಯ ಆಕರ್ಷಕವಾಗಿತ್ತು.
ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾ.ಪಂ ಇಒ ಜಿ.ಮುನಿರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಬಂಕ್ ಮುನಿಯಪ್ಪ, ತಾದೂರು ರಘು, ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಮೇಲೂರು ಆರ್.ಎ.ಉಮೇಶ್, ಶ್ರೀನಿವಾಸಗೌಡ, ಬಿ.ನಾರಾಯಣಸ್ವಾಮಿ, ಗ್ರಾಮ.ಪಂ ಉಪಾಧ್ಯಕ್ಷೆ ಮಂಜುಳಮ್ಮ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಸಿ.ಎಂ.ಮುನಿರಾಜು, ಅಕ್ಷರದಾಸೋಹದ ಆಂಜನೇಯ, ಆನೂರು ವಿಜಯೇಂದ್ರ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟಶಿವಾರೆಡ್ಡಿ ಹಾಜರಿದ್ದರು.