Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಗಳ ಸಕ್ಸಸ್ ಶಿಕ್ಷಕಿಯರ ತಂಡ ಅಖಿಲ ಭಾರತ ನಾಗರಿಕ ಸೇವಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 2024-25ನೇ ಸಾಲಿನ ಈ ಸ್ಪರ್ಧೆಗಳು ಫೆಬ್ರವರಿ 25ರಿಂದ ಮಾರ್ಚ್ 3ರವರೆಗೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆದಿದ್ದು, ಈ ತಂಡವು ಜನಪದ ನೃತ್ಯ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದಿದೆ.
ಕರ್ನಾಟಕದ ಬುಡಕಟ್ಟು ಜನಾಂಗದ ವೈಶಿಷ್ಟ್ಯವನ್ನು ತೋರುವಂತೆ, ಸ್ವತಃ ತಾವೇ ತಯಾರಿಸಿದ ವೇಶಭೂಷಣಗಳು ಹಾಗೂ ಬಿದಿರಿನ ಸಾಮಗ್ರಿಗಳನ್ನು ಬಳಸಿಕೊಂಡು ಸ್ಫೂರ್ತಿದಾಯಕ ನೃತ್ಯ ಸಂಯೋಜನೆಯ ಮೂಲಕ ಪ್ರೇಕ್ಷಕರ ಮನಗೆದ್ದ ಶಿಕ್ಷಕಿಯರ ತಂಡ ಪ್ರಥಮ ಸ್ಥಾನ ಗಳಿಸಿದೆ.
ಈ ತಂಡದ ಕಲಾವಿದರಾಗಿ ದ್ಯಾವರಹಳ್ಳಿಯ ಶಾಲೆಯ ಎನ್.ಸೌಮ್ಯ, ಪೆಂಡ್ಲಿವಾರಹಳ್ಳಿ ಶಾಲೆಯ ಉಷಾ, ಪಿಲ್ಲಿಗುಂಡ್ಲಹಳ್ಳಿ ಶಾಲೆಯ ಎಂ.ಎಲ್.ಚೂಡಾಮಣಿ, ಬಶೆಟ್ಟಹಳ್ಳಿ ಶಾಲೆಯ ಚೈತ್ರ, ಹೊಸಕೆರೇಹಳ್ಳಿ ಶಾಲೆಯ ಹೇಮಾವತಿ, ಹೊಸಪೇಟೆ ಶಾಲೆಯ ಶೈಲ, ಭಕ್ತರಹಳ್ಳಿ ಸಿ.ಆರ್.ಪಿ ಸರಿತ ಭಾಗವಹಿಸಿದ್ದರು. ಈ ಶಿಕ್ಷಕಿಯರು ಪ್ರತಿವರ್ಷ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಹಂತದಲ್ಲಿ ಮಿಂಚುತ್ತಿದ್ದು, ಈ ಮೊದಲು ಒಮ್ಮೆ ದ್ವಿತೀಯ ಹಾಗೂ ಎರಡು ಬಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ.
2022-23ನೇ ಸಾಲಿನಲ್ಲಿ ತ್ರಿಪುರದ ಅಗರ್ತಲಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗೂ ಈ ತಂಡ ಭಾಗವಹಿಸಿತ್ತು. 2023-24ನೇ ಸಾಲಿನಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಸಾಮೂಹಿಕ ಜನಪದ ನೃತ್ಯ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಶಿಡ್ಲಘಟ್ಟ ತಾಲ್ಲೂಕಿನ ಶಿಕ್ಷಕಿಯರು ಇತಿಹಾಸ ನಿರ್ಮಿಸಿದ್ದಾರೆ.
ಶಿಕ್ಷಕಿಯರ ಈ ಸಾಧನೆಗೆ ಶಾಸಕ ಬಿ.ಎನ್.ರವಿಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಹೇಮಾವತಿ, ಬಿಇಒ ನರೇಂದ್ರಕುಮಾರ್, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಶಿಕ್ಷಕರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ.
ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಚೌಡರೆಡ್ಡಿಹಳ್ಳಿ ಶಾಲೆಯ ಶಿಕ್ಷಕ ಕಿಶೋರ್ ಕುಮಾರ್ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

ಅಖಿಲ ಭಾರತ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಚೌಡರೆಡ್ಡಿಹಳ್ಳಿ ಸರಕಾರಿ ಶಾಲೆಯ ಶಿಕ್ಷಕ ಕಿಶೋರ್ ಕುಮಾರ್ ರಾಷ್ಟ್ರ ಮಟ್ಟದಲ್ಲಿ ಮೊದಲ ಬಹುಮಾನ ಗೆದ್ದು ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.