Sidlaghatta : ಜುಲೈ 17 ರಿಂದ ಆಗಸ್ಟ್ 2 ರವರೆಗೂ 15 ದಿನಗಳ ಕಾಲ “ಕ್ಷಯ ಮುಕ್ತ ಸಮೀಕ್ಷೆ”ಯನ್ನು ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷಯ ಮುಕ್ತ ಭಾರತ ಅಭಿಯಾನದಡಿ ಕ್ಷಯ ಮುಕ್ತ ಸಮೀಕ್ಷೆಯನ್ನು ಕೈಗೊಳ್ಳಲಿದ್ದು ಸುಮಾರು 45 ಸಾವಿರ ಮಂದಿಯನ್ನು ಭೇಟಿ ಮಾಡಲಿರುವ ನಮ್ಮ ಸಿಬ್ಬಂದಿಯು ಅವರಲ್ಲಿ ಕ್ಷಯ ರೋಗದ ಯಾವುದಾದರೂ ಒಂದೇ ಒಂದು ಲಕ್ಷಣ ಮೇಲ್ನೋಟಕ್ಕೆ ಕಂಡು ಬಂದರೂ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.
ಆಕ್ಟೀವ್ ಕೇಸ್ ಫೈಂಡಿಂಗ್(ಎಸಿಎಫ್) ಪರೀಕ್ಷೆಯನ್ನು ಶಿಡ್ಲಘಟ್ಟ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಸ್ಲಂ ಏರಿಯಾ, ಜನನಿಬಿಡ ಪ್ರದೇಶ, ದೂರದೂರದಲ್ಲಿನ ಒಂಟಿ ಮನೆ, ರೇಷ್ಮೆ ನೂಲು ಬಿಚ್ಚಾಣಿಕೆ, ಇಟ್ಟಿಗೆ ನಿರ್ಮಾಣ, ಕೋಳಿ ಫಾರಂ ಮುಂತಾದ ಕಡೆ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಆಧ್ಯತೆ ಮೇರೆಗೆ ಸ್ಕ್ರೀನಿಂಗ್ ಮಾಡಲಾಗುವುದು.
ಜತೆಗೆ ಕಟ್ಟಡ ನಿರ್ಮಾಣದಂತ ಕೆಲಸಗಳಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಮನೆಗಳಿಗೂ ಭೇಟಿ ನೀಡಿ ಅವರಲ್ಲಿ ಕ್ಷಯ ರೋಗದ ಯಾವುದಾದರೂ ಲಕ್ಷಣಗಳು ಇವೆಯಾ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುತ್ತೇವೆ ಎಂದರು.
ಒಂದೊಮ್ಮೆ ಎರಡು ವಾರಕ್ಕಿಂತಲೂ ಹೆಚ್ಚ ಸಮಯದಿಂದ ವಾಸಿಯಾಗದ ಕೆಮ್ಮು ಇದ್ದರೆ, ರಾತ್ರಿ ಸಮಯ ಜ್ವರ ಬರುವುದು, ಹಸಿವು ಆಗದಿರುವುದು, ಕಫ ಹೆಚ್ಚಿರುವುದು ಮತ್ತು ಕಫದಲ್ಲಿ ರಕ್ತ ಬರುವುದು, ತೂಕ ಕಡಿಮೆ ಆಗುವಂತ ಲಕ್ಷಣಗಳು ಕಂಡು ಬಂದರೆ ಅವರನ್ನ ತಪಾಸಣೆಗೆ ಒಳಪಡಿಸಲಾಗುತ್ತದೆ.
ಆಸ್ಪತ್ರೆಯಲ್ಲಿ ಕಫ ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಕ್ಷಯ ಬ್ಯಾಕ್ಟೀರಿಯಾ ಕಂಡು ಬಂದಲ್ಲಿ ಅವರಿಗೆ ಕೂಡಲೆ ಚಿಕಿತ್ಸೆಯನ್ನು ಆರಂಭಿಸುತ್ತೇವೆ. 6 ತಿಂಗಳ ಕಾಲದ ಚಿಕಿತ್ಸೆಯನ್ನ ಉಚಿತವಾಗಿ ನೀಡುತ್ತೇವೆ ಎಂದು ವಿವರಿಸಿದರು.
ಕಫದಲ್ಲಿ ಕ್ಷಯದ ಬ್ಯಾಕ್ಟೀರಿಯಾ ಕಂಡು ಬರದಿದ್ದಲ್ಲಿ ಎಕ್ಸರೆ ಪರೀಕ್ಷೆ ಮಾಡ್ತೇವೆ ಅಲ್ಲೂ ಕ್ಷಯದ ಬ್ಯಾಕ್ಟೀರಿಯಾ ಕಂಡು ಬರದಿದ್ದಲ್ಲಿ ಸಿಬಿ ನ್ಯಾಟ್ ಮತ್ತು ಟ್ರೂ ನ್ಯಾಟ್ ಪರೀಕ್ಷೆಯನ್ನು ಮಾಡ್ತೇವೆ.
ಜತೆಗೆ ಕಳೆದ ಏಳು ವರ್ಷಗಳ ಹಿಂದೆಯೆ ಕ್ಷಯ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದವರಿಗೂ ಹಾಗೂ ಅವರ ಕುಟುಂಬದವರಿಗೆ ಮತ್ತೊಮ್ಮೆ ಈ ಅಭಿಯಾನದಲ್ಲಿ ತಪಾಸಣೆ ಮಾಡಲಾಗುವುದು ಎಂದು ಹೇಳಿದರು.
ಮುಖ್ಯವಾಗಿ ದುರ್ಬಲ ಜನಾಂಗ(ವಲ್ಲರಬಲ್ ಪ್ರದೇಶ) ಇರುವ ಪ್ರದೇಶದಲ್ಲಿ ಹೆಚ್ಚಿನ ತಪಾಸಣೆಗೆ ಆಧ್ಯತೆ ನೀಡುತೇವೆ. ಮುಂದಿನ 2025 ನೇ ವರ್ಷಕ್ಕೆ ದೇಶದಲ್ಲಿ ಯಾರೊಬ್ಬರೂ ಕ್ಷಯ ರೋಗದವರು ಇರಬಾರದು ಎನ್ನುವುದು ಸರ್ಕಾರದ ಉದ್ದೇಶ ಮತ್ತು ದ್ಯೇಯ.
ಹಾಗಾಗಿ ಪ್ರತಿ 6 ತಿಂಗಳಿಗೊಮ್ಮೆ ಕ್ಷಯ ರೋಗ ಸಮೀಕ್ಷೆಯನ್ನು ಹಮ್ಮಿಕೊಳ್ಳುತ್ತಿದ್ದು ನಮ್ಮ ಸಿಬ್ಬಂದಿಗೆ ಸಾರ್ವಜನಿಕರು ಸಹಕರಿಸಬೇಕು, ಕ್ಷಯ ರೋಗ ಮುಕ್ತ ಭಾರತ ದೇಶದ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.