Sidlaghatta : ಶಿಡ್ಲಘಟ್ಟ ನಗರದ ಹೊರವಲಯದ ಇದ್ಲೂಡು ರಸ್ತೆಯ ಮಾರುತಿನಗರದ ಬಳಿಯ ತೋಟವೊಂದರಲ್ಲಿ ದನ ಕರುಗಳಿಗೆ ಮೇವು ತರಲೆಂದು ಹೋದ ಮಹಿಳೆಯೊಬ್ಬರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಮಾರುತಿ ನಗರದ ದೇವೀರಮ್ಮ (50) ಮೃತ ದುರ್ದೈವಿ ಎನ್ನಲಾಗಿದೆ.
ಬುಧವಾರ ಸಂಜೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಬೆಸ್ಕಾಂ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಗುರುವಾರ ಬೆಳಗ್ಗೆಯಾದರೂ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಬಾರದೇ ಇದ್ದ ಹಿನ್ನಲೆಯಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೇ ಕೂಡಲೇ ನಿರ್ಲಕ್ಷ್ಯ ಬಹಿಸಿದ ಸಿಬ್ಬಂದಿಯನ್ನು ಅಮಾನತ್ತು ಮಾಡಬೇಕು ಮತ್ತು ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಸೇರಿದಂತೆ ವಿವಿಧ ರೈತ ಮುಖಂಡರು ಕೆಲ ಕಾಲ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿ ಮುಕ್ತಾಂಭ, ಚಿಂತಾಮಣಿ ಉಪವಿಭಾಗದ ಇಇ ಶಿವಕುಮಾರ್, ಎಇಇ ರೆಹಮಾನ್ ಭೇಟಿ ನೀಡಿ ಸ್ಥಳೀಯರ ಮನವಿ ಆಲಿಸಿದ ನಂತರ ಘಟನೆಗೆ ಕಾರಣರಾದ ಲೈನ್ ಮೆನ್‌ನ ಅಮಾನತ್ತು ಮಾಡುವುದು ಮತ್ತು ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.