Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ಕಿನ್ನಿಗೋಳಿನ ಮೋಹಿನಿ ಕಲಾ ತಂಡದಿಂದ “ಗಜೇಂದ್ರ ಮೋಕ್ಷ” ಎನ್ನುವ ಯಕ್ಷಗಾನ (Yakshagana) ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ, ಪರಂಪರೆ, ಸಂಸ್ಕಾರ, ಪುರಾಣ, ಆಚಾರ ವಿಚಾರಗಳನ್ನು ತಿಳಿಸುವ, ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡುವ ಅನೇಕ ಕಲೆಗಳು ಮರೆಯಾಗುತ್ತಿವೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ವಿನಾಶದ ಅಂಚಿಗೆ ತಲುಪುತ್ತಿರುವ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಜೊತೆಗೆ ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ಕೊತ್ತನೂರು ಪಂಚಾಕ್ಷರಿರೆಡ್ಡಿ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಹಿರಿಯರ ಪರಂಪರೆ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುತ್ತವೆ. ಅದೆಷ್ಟೋ ಮಂದಿಗೆ ನಮ್ಮ ಹಿರಿಯರ ಸಂಪ್ರದಾಯಗಳು ವಾಡಿಕೆಯ ಆಚಾರಗಳೆ ಗೊತ್ತಿಲ್ಲವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಜಪಾನ್ ಶಿವು ಅವರ ತಂಡವು ಗಜೇಂಧ್ರ ಮೋಕ್ಷ ಎನ್ನುವ ಪ್ರದರ್ಶನ ನೀಡಿದರು. ಬೆಳಗಿನ ಜಾವ ಎರಡು ಗಂಟೆಯವರೆಗೂ ನಡೆದ ಕಾರ್ಯಕ್ರಮವನ್ನು ಗ್ರಾಮಸ್ಥರು ಚಳಿ ಗಾಳಿ ಎನ್ನದೆ ಕಿಕ್ಕಿರಿದು ನೋಡಿ ಸಂಭ್ರಮಿಸಿದರು.