Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸೇನಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರೈತರಿಗಾಗಿ ಸ್ಥಾಪಿಸಿರುವ ಕೃಷಿ ಮಾಹಿತಿ ಕೇಂದ್ರವನ್ನು ಉದ್ಘಾಟನೆ ಮಾಡಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪಿ.ವೆಂಕಟರಮಣ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ನಡೆದಿರುವ ತಾಂತ್ರಿಕತೆ, ವೈಜ್ಞಾನಿಕ ಸಂಶೋಧನೆಗಳು ಪ್ರತಿಯೊಬ್ಬ ರೈತರಿಗೂ ಮುಟ್ಟಬೇಕು. ಈ ಉದ್ದೇಶದಿಂದ ಕೃಷಿ ಮಾಹಿತಿ ಕೇಂದ್ರವನ್ನು ವಿದ್ಯಾರ್ಥಿಗಳು ತೆರೆದಿದ್ದಾರೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಅಜೋಲ ತಯಾರಿಕೆ, ಮಣ್ಣು ಪರೀಕ್ಷೆ, ಅಣಬೆ ಕೃಷಿಯ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಾರೆ. ರೇಷ್ಮೆಯು ಕಲ್ಪವೃಕ್ಷದಂತೆ, ಯಾವುದೂ ವ್ಯರ್ಥವಲ್ಲ. ರೇಷ್ಮೆ ತ್ಯಾಜ್ಯದಿಂದ ಅಲಂಕಾರಿಕ ವಸ್ತುಗಳನ್ನು ಹೇಗೆಲ್ಲಾ ತಯಾರಿಸಬಹುದೆಂದು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ಮಾಹಿತಿ ಪಡೆದು ಕೃಷಿ ವಿಧಾನದಲ್ಲಿ ರೈತರು ಅಳವಡಿಸಿಕೊಳ್ಳಬೇಕು ಎಂದರು.
ರೈತರ ಆಕರ್ಷಣೆಗಾಗಿ ವಿದ್ಯಾರ್ಥಿಗಳು ರೇಷ್ಮೆ ಗೂಡಿನಿಂದ ಸುಂದರವಾದ ಗೊಂಬೆ ತಯಾರಿಸಿದ್ದರು. ಈ ಗೊಂಬೆಗೆ ಸಿಲ್ಕ್ ಸಿಂಡ್ರೆಲ್ಲಾ ಎಂದು ನಾಮಕರಣ ಮಾಡಿದ್ದು, ಗ್ರಾಮಸ್ಥರೆಲ್ಲರನ್ನು ಆಕರ್ಷಿಸುವಲ್ಲಿ ಅದು ಸಫಲವಾಗಿತ್ತು.
ರೇಷ್ಮೆ ಕೃಷಿ ಮಹಾವಿದ್ಯಾಲಯದ ರೇಷ್ಮೆ ವಿಭಾಗದ ಮುಖ್ಯಸ್ಥ ಡಾ.ಆರ್.ಕೆ.ನಾಯಕ್, ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ್ ರೆಡ್ಡಿ ಮೋಹಿತ್, ಡಾ.ಭಾರತಿ, ವಿದ್ಯಾರ್ಥಿಗಳಾದ ಬಸವರಾಜ್, ಚಂದನ್, ಆದರ್ಶ್, ಅಮೋಘ್, ಹರ್ಷದ್, ಐಶ್ವರ್ಯ, ಭಾರತಿ, ಚೈತ್ರ, ಜಯಶ್ರೀ, ಲಾವಣ್ಯ, ಮಮತಾ ಹಾಗೂ ಊರಿನ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.