Melur, Sidlaghatta : ದೇಶದ ಅಭಿವೃದ್ಧಿಯು ಹಳ್ಳಿಗಳ ಅಭಿವೃದ್ಧಿಯ ಮೇಲೆ ಅವಲಂಬಿಸಿದೆ ಎನ್ನುವ ಮಹಾತ್ಮ ಗಾಂಧೀಜಿಯವರ ಮಾತಿನಂತೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಳ್ಳಿಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಗಂಗಮ್ಮ ದೇವಾಲಯದ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ಹಾಗು ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮದ್ಯಸೇವನೆಯನ್ನು ವಿರೋಧಿಸುತ್ತಿದ್ದ ಮಹಾತ್ಮ ಗಾಂಧೀಜಿ ಅವರು ಸರಳ ಬದುಕಿನಿಂದ ಭಗವಂತನನ್ನು ಕಾಣಬಹುದು ಎಂಬುದನ್ನು ತಮ್ಮ ಆದರ್ಶಮಯ ಬದುಕಿನ ಮೂಲಕ ತಿಳಿಸಿಕೊಟ್ಟಿದ್ದಾರೆ. ಈ ಸಂದೇಶವನ್ನು ಪ್ರಸ್ತುತ ಸಮಾಜದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಹಲವು ಕುಟುಂಬಗಳಿಗೆ ನೆರವಾಗುತ್ತಿದ್ದಾರೆ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಬೆಂಕಿ ದೇಹವನ್ನು ನಾಶ ಮಾಡಿದರೆ, ಮದ್ಯ ಮತ್ತು ಮಾದಕ ವಸ್ತು ದೇಹ, ಆತ್ಮ ಮತ್ತು ಕುಟುಂಬವನ್ನೂ ನಾಶ ಮಾಡುತ್ತದೆ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಮದ್ಯ ಸೇವನೆಯಿಂದಾಗುವ ಕೆಡಕನ್ನು ಅವರಿಗೆ ಮನದಟ್ಟು ಮಾಡಿ ಕೆಟ್ಟ ಚಟವನ್ನು ಬಿಡುವಂತೆ ಮನವರಿಕೆ ಮಾಡುವ ಕೆಲಸದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಸಮಾಜಕ್ಕೆ ಬಹಳ ಉಪಯೋಗವಾಗುತ್ತಿದೆ ಎಂದರು.
ಮದ್ಯಪಾನ ಕೇವಲ ಒಬ್ಬನ ಪ್ರಾಣ ತೆಗೆಯುವುದಿಲ್ಲ ಬದಲಿಗೆ ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗುತ್ತದೆ, ಹಾಗಾಗಿ ಪ್ರತಿಯೊಬ್ಬರು ಗಾಂಧೀಜಿಯವರ ಆಶಯದಂತೆ ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಆರ್.ಎ.ಉಮೇಶ್, ಜನಜಾಗೃತಿ ವೇದಿಕೆ ಸದಸ್ಯರಾದ ಎ.ಎಂ.ತ್ಯಾಗರಾಜ್, ಸುರೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸುರೇಶ್‌ಗೌಡ.ಎಸ್. ಮೇಲ್ವಿಚಾರಕ ಧನಂಜಯ್ ಹಾಜರಿದ್ದರು.