Srinivasapura : ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‌ನ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ (K R RameshKumar) ಸ್ವಗೃಹದಲ್ಲಿ ಭಾನುವಾರ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ (Congress Meeting) ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ರಮೇಶ್ ಕುಮಾರ್ “45 ವರ್ಷ ಕಾಲ ನನ್ನನ್ನು ದೇವರೆಂದು ಭಾವಿಸಿ, ನನ್ನನ್ನೇ ಕನಸು ಮನಸಿನಲ್ಲಿಯೂ ಸ್ಮರಿಸುವ, ಕಟ್ಟಾಳು ಗಳಾಗಿ ನಿಂತಿರುವ ಶ್ರೀನಿವಾಸಪುರ ಕ್ಷೇತ್ರದ ಜನರಿಗೆ ನನ್ನ ವಂದನೆ. ಕೆ.ವಿ.ಗೌತಮ್ ನಮ್ಮ ಮನೆಯ ಮಗ ಇದ್ದಂತೆ. ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ತಾಯಿ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರ ಋಣವನ್ನು ತೀರಿಸಬೇಕಾಗಿದೆ. ನನಗೆ ಯಾರು ದ್ರೋಹ ಮಾಡಿದ್ದಾರೆ, ನನ್ನೊಂದಿಗಿದ್ದು ನನ್ನ ಬೆನ್ನಿಗೆ ಯಾರು ಚೂರಿ ಹಾಕಿದ್ದಾರೆ ಎಂಬೆಲ್ಲಾ ಅಂಶಗಳು ನನಗೆ ತಿಳಿದಿದೆ. ಏಪ್ರಿಲ್ 13ರಂದು ಬೆಳಿಗ್ಗೆ 11 ಗಂಟೆಗೆ ಶ್ರೀನಿವಾಸಪುರ ಪಟ್ಟಣದ ಮ್ಯಾಂಗೋ ಮಂಡಿಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದ್ದು ನಾನು ಯಾವುದೇ ಊರಿಗೆ ಬಂದು ಮಾತಯಾಚನೆ ಮಾಡುವುದಿಲ್ಲ. ನಿಮಗೆ ನೀತಿ ಇದ್ದರೆ, ದ್ರೋಹದ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಿ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಆರ್.ಜಿ. ನರಸಿಂಹಯ್ಯ, ಕೆ.ಕೆ. ಮಂಜುನಾಥ್ ರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ವೆಂಕಟಶಿವಾರೆಡ್ಡಿ, ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಪಣಸಮಾಕನಹಳ್ಳಿ ವೈ.ವಿ. ನರಸಿಂಹಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.