Home Sidlaghatta ಸ್ವಾಮಿ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವ

ಸ್ವಾಮಿ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವ

0

Mallur, Sidlaghatta : ವಿದ್ಯಾರ್ಥಿಗಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತೆ ಶಿಕ್ಷಕರು ತರಬೇತಿಗೊಳಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ನಾಗೇಶ್ ಹೇಳಿದರು.

ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಅವರಲ್ಲಿದ್ದ ದೇಶಭಕ್ತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು.ಅವರು ಉತ್ತಮ ಮನಪರಿವರ್ತಕರಾಗಿದ್ದರು. ಪಠ್ಯಪುಸ್ತಕದಲ್ಲಿನ ಶಿಕ್ಷಣ ಮಾತ್ರವೇ ಜೀವನ ಬದಲಾಯಿಸುವುದಿಲ್ಲ. ನಾವು ನೋಡಿ ಕಲಿತದ್ದು, ಮತ್ತು ಸ್ವತಃ ಅನುಭವಗಳು ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಪರಿವರ್ತನೆ ಮಾಡುತ್ತವೆ. ಕೇವಲ ಅಂಕಗಳನ್ನು ಗಳಿಸುವುದಕ್ಕಾಗಿ ಮಾತ್ರವೇ ಓದಬಾರದು. ಜ್ಞಾನಸಂಪಾದನೆಗಾಗಿ ಓದಬೇಕು.

ನಾವು ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಎಂಬ ಕೀಳರಿಮೆ ಇರಬಾರದು. ಪ್ರಯತ್ನ ಮಾಡಬೇಕು. ಗುರಿ ಸಾಧಿಸುವ ಛಲವನ್ನು ಇಟ್ಟುಕೊಂಡಿರಬೇಕು. ತೆರೆದ ಮನಸ್ಥಿತಿ ಇರಬೇಕು. ಇತ್ತಿಚೆಗೆ ಯುವಜನರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಆತಂಕವನ್ನು ತರುತ್ತಿದೆ. ಬಾಲ್ಯ ವಿವಾಹಗಳು ಜಾಸ್ತಿಯಾಗುತ್ತಿವೆ. ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರು ಜೀವನದಲ್ಲಿ ಇರುವ ಅವಕಾಶಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದರು.

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎನ್.ಚಂದ್ರಶೇಖರ್ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿನ ವಾತಾವರಣವು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಯಾವುದಾದರೂ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಗುರಿಯನ್ನು ಹೊಂದಿದ್ದರೆ, ಯಾವ ಕ್ಷೇತ್ರದಲ್ಲಾದರೂ ಸಾಧಿಸಬಹುದು. ಚಿಕಾಗೋ ನಗರದಲ್ಲಿ ಸ್ವಾಮಿ ವಿವೇಕಾನಂದರು ಮಾಡಿರುವ ಭಾಷಣದ ಮೂಲಕ ವಿಶ್ವದ ಗಮನವನ್ನು ಭಾರತದ ಕಡೆಗೆ ಸೆಳೆಯುವಂತಹ ಪ್ರಯತ್ನ ಮಾಡಿದ್ದರು. ಅಂತಹ ಸಾಧಕರಾಗಬೇಕು ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹಾಗೂ ವಿಷಯವಾರು ಉತ್ತಮ ಸಾಧನೆ ಮಾಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಶಾವತಾರ, ಯಕ್ಷಗಾನ, ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ ಗಮನ ಸೆಳೆಯಿತು.

ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎನ್.ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಆರ್.ಶಿವಣ್ಣ, ಖಜಾಂಚಿ ಚಂದ್ರಶೇಖರ್, ನಿರ್ದೇಶಕರಾದ ಎಂ.ಕೆ.ಚಂದ್ರಶೇಖರ್, ಸಿ.ನಾರಾಯಣಸ್ವಾಮಿ, ಸಿ.ಎಂ.ದೇವರಾಜ್, ಎಂ.ಆರ್.ಮಂಜುನಾಥ್ ಬಾಬು, ಕೆ.ಎಂ.ಮುನಿರೆಡ್ಡಿ, ವೈ.ಎಂ.ರಮೇಶ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version