Chikkaballapur: ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದರು.
ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಗುರುಭವನ ಆಗಬೇಕು ಎನ್ನುವ ಬೇಡಿಕೆ ಇತ್ತು. ಈಗ ಈ ಶುಭ ಸಂದರ್ಭ ಕೂಡಿ ಬಂದಿದೆ. ಜಿಲ್ಲಾಧಿಕಾರಿಗಳು ಸೂಕ್ತ ಜಾಗವನ್ನು ಗುರುತಿಸಿ ಕಟ್ಟಡ ನಿರ್ಮಿಸಲು ಸೂಚನೆ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ₹ 4ರಿಂದ ₹ 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಒಂದು ವರ್ಷದ ಒಳಗೆ ಗುಣಮಟ್ಟದ ಗುರುಭವನವನ್ನು ನಿರ್ಮಿಸುವುದು ಈಗಿನ ಗುರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಅವರು ತಿಳಿಸಿದರು.
ಶಿಕ್ಷಕರಿಗೆ ಗೌರವ ಸಲ್ಲಿಸಲು ಗುರುಭವನವನ್ನು ಸುಸಜ್ಜಿತವಾಗಿ ನಿರ್ಮಿಸಬೇಕಾಗಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ₹ 2 ಕೋಟಿ, ರಾಜ್ಯ ಸರ್ಕಾರದಿಂದ ₹ 1 ಕೋಟಿ ನೀಡಲಾಗುವುದು. ಇನ್ನೂ ₹ 2 ಕೋಟಿ ಸಂಗ್ರಹಿಸಲಾಗುವುದು ಎಂದರು.
ಶಿಕ್ಷಣ ವ್ಯವಸ್ಥೆ ಕಟ್ಟಡಗಳಿಂದ ಮಾತ್ರ ಸುಧಾರಿಸುವುದಿಲ್ಲ. ಅದಕ್ಕೆ ಶಿಕ್ಷಕರೇ ಮುಖ್ಯ ಕರಣ. ನಮ್ಮದು ಗುರುಪರಂಪರೆ, ನಾವು ಗುರುಗಳನ್ನು ದೇವರ ಸ್ಥಾನದಲ್ಲಿರಿಸಿ ಪೂಜಿಸುತ್ತೇವೆ. ಮಕ್ಕಳನ್ನು ಜ್ಞಾನ ಸಂಪನ್ನರನ್ನಾಗಿ ಮಾಡುವುದು ಶಿಕ್ಷಕರು. ಅವರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು, ಸಮ ಸಮಾಜ ನಿರ್ಮಾಣವನ್ನು ಮಾಡುವ ದಿಕ್ಕಿನಲ್ಲಿ ಆಲೋಚನೆ ಮಾಡಬೇಕು ಎಂದರು.
ವೈದ್ಯರು, ಶಿಕ್ಷಕರು, ಪೊಲೀಸರು ಸದಾ ಸಮಾಜಮುಖಿಯಾಗಿ ಆಲೋಚನೆ ಮಾಡುವವರಾಗಿರಬೇಕು. ಈ ವೃತ್ತಿಗಳು ವೇತನಕ್ಕೆ ಕೆಲಸ ಮಾಡುವುದಲ್ಲ, ಸೇವೆಯೇ ಅವರ ಮೊದಲ ಆದ್ಯತೆ ಆಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿಸಿ ಸಿಇಒ ಪಿ. ಶಿವಶಂಕರ್, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ವೇದಿಕೆಯಲ್ಲಿ ಇದ್ದರು.
Your email address will not be published. Required fields are marked *
Save my name, email, and website in this browser for the next time I comment.
2021 Chikkaballapur.com