Timmanayakanahalli, Sidlaghatta : “ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ (Agrahara Lake) ಕಟ್ಟೆ ಒಡೆದು 8 ತಿಂಗಳಾದರೂ ದುರಸ್ಥಿ ಕಾರ್ಯ ಇನ್ನೂ ಡಿಪಿಆರ್ ಹಂತದಲ್ಲೆ ಕುಂಟುತ್ತಾ ಸಾಗುತ್ತಿದೆ. ರೈತರ ಪರಿಹಾರದ ವರದಿಯು ಇಲಾಖೆಗಳನ್ನು ಸುತ್ತುತ್ತಿದೆ. ಇಷ್ಟರಲ್ಲಿ ಎಲ್ಲಾ ಸಮಸ್ಯೆಗಳ ಮನವಿಗಳು ಪಡೆದಿದ್ದ ಹಿಂದಿನ ಜಿಲ್ಲಾಧಿಕಾರಿಗಳು ವರ್ಗಾವಣೆಯಾದರು. ದಯಮಾಡಿ ರೈತರ ಕಷ್ಟಕ್ಕೆ ನೀವು ಸ್ಪಂದಿಸಬೇಕು” ಎಂದು ರಾಜ್ಯ ಯುವಶಕ್ತಿ ಉಪಾಧ್ಯಕ್ಷ ನಲ್ಲೊಜನಹಳ್ಳಿ ವಿಜಯ ಬಾವರೆಡ್ಡಿ ಅವರು ಜಿಲ್ಲಾಧಿಕಾರಿ ಅವರನ್ನು ಮನವಿ ಮಾಡಿದರು.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಕೆರೆ ಹಾಗೂ ಅಚ್ಚುಕಟ್ಟು ಪ್ರದೇಶವನ್ನು ವೀಕ್ಷಿಸಿದ ಸಂದರ್ಭದಲ್ಲಿ ಅವರು ಸುತ್ತಲಿನ ರೈತರೊಂದಿಗೆ ವಸ್ತುಸ್ಥಿತಿಯನ್ನು ವಿವರಿಸಿ ಮನವಿ ಸಲ್ಲಿಸಿದರು.
ಪಾಪಾಗ್ನಿ ನದಿ ಪಾತ್ರದ ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಹಾಗೂ ಚಿಕ್ಕಬಂದರಘಟ್ಟ ಕೆರೆ ಕಟ್ಟೆ ಒಡೆದು ಪಲವತ್ತಾದ ಭೂಮಿ ಕೊಚ್ಚಿ ಹೋಗಿ 8 ತಿಂಗಳು ಕಳೆದಿದೆ. ಅಧಿಕಾರಿಗಳು ಪರಿಹಾರ ಕೊಡಲು ಇಲಾಖೆಗಳಿಂದ ಇಲಾಖೆಗಳಿಗೆ ವರದಿ ರವಾನಿಸಿ ಕಾಲಹರಣ ಮಾಡುತ್ತಿದ್ದಾರೆ. ಜಮೀನು ಕಳೆದುಕೊಂಡ ರೈತರು 7 ತಿಂಗಳಾದರೂ ಪರಿಹಾರ ಸಿಗದೇ, ಮಣ್ಣು ಸವಕಳಿ ಸರಿಪಡಿಸಲಾಗದೆ, ಬೆಳೆಯು ಇಡಲಾಗದೆ ಸಂಕಷ್ಟದಲ್ಲಿ ಇದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳಲ್ಲಿ ಮಣ್ಣು ಸವಕಳಿ ಪರಿಹಾರಕ್ಕೆ ಅವಕಾಶವಿದ್ದರೂ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಕೋರಿದರು.
ಕಳೆದ ವರ್ಷ ತಿಮ್ಮನಾಯಕನಹಳ್ಳಿ ಮತ್ತು ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಕಟ್ಟೆಗಳು ಒಡೆದು ಹೋಗಿ ರೈತರು ಬೆಳೆದಿದ್ದ ಬೆಳೆಯಷ್ಟೇ ಅಲ್ಲದೆ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗಿದೆ. ಸರ್ಕಾರ ಕೂಡಲೇ ವಿಶೇಷ ವಿಪತ್ತು ಎಂದು ಪರಿಗಣಿಸಿ ರೈತರಿಗೆ ಸೂಕ್ತ ನಷ್ಟ ಪರಿಹಾರವನ್ನು ಒದಗಿಸಬೇಕೆಂದು ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಹಾಗೂ ಬಂದರಘಟ್ಟ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು.
ಜಿಲ್ಲಾಡಳಿತದಿಂದ ಪರಿಹಾರ ಸಿಗದಾದಾಗ, ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಅಪಾರ ನಷ್ಟವುಂಟಾದ ರೈತರಿಗೆ ಪರಿಹಾರ ನೀಡುವಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲವೆಂದು ರೈತರು ಬುಧವಾರ ವಿಧಾನಸೌಧದ ಬಾಗಿಲು ಸಹ ಬಡಿದಿದ್ದರು.
ರೈತರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು, ರೈತರ ಪರಿಹಾರ, ರಸ್ತೆ ಹಾಗೂ ಕೆರೆ ಕಟ್ಟೆ ದುರಸ್ಥಿ ಕಾರ್ಯಗಳ ಪ್ರಗತಿಯ ವೇಗವರ್ಧನೆ ಗೊಳಿಸಿ ರೈತರಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.