Sidlaghatta : ವೈಕುಂಠ ಏಕಾದಶಿ ಪ್ರಯುಕ್ತ ಶನಿವಾರ ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.
ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಗರದ ವಾಸವಿ ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು, ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿರಿಸಿದ್ದು, ಭಕ್ತರು ದೇವರ ಅಡಿಯಲ್ಲಿ ಹಾದು ಬರಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ತಂಡೋಪತಂಡವಾಗಿ ಆಗಮಿಸಿದ ಭಕ್ತಾಧಿಗಳು ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು. ಮದ್ಯಾಹ್ನದವರೆಗೂ ವೈಕುಂಠದ ಬಾಗಿಲ ಮೂಲಕ ದೇವರ ದರ್ಶನ ಪಡೆದರು.
ವೈಕುಂಠ ಏಕಾದಶಿಯ ಪ್ರಯುಕ್ತ ಸ್ವಾಮಿಯವರಿಗೆ ಸುಪ್ರಭಾತ ಸೇವೆ, ಅಭಿಷೇಕ, ವಜ್ರಾಕೋಷ ಅಲಂಕಾರ ಹಾಗೂ ವೈಕುಂಠ ದ್ವಾರ ದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವೈಕುಂಠ ಏಕಾದಶಿಯ ದಿನ ತಮ್ಮ ಪೂರ್ವಜರಿಗೆ, ಮಾತಾ ಪಿತೃಗಳಿಗೆ ಸದ್ಗತಿ ಮತ್ತು ವೈಕುಂಠ ಪ್ರಾಪ್ತಿಯಾಗಲಿ ಎಂದು ಹೇಳಿ ವೈಕುಂಠ ದ್ವಾರ ಪ್ರವೇಶವನ್ನು ಮಾಡಿದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥ ಪ್ರಸಾದಗಳನ್ನು ವಿನಿಯೋಗ ಮಾಡಲಾಯಿತು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ, ಕೆ.ಎಚ್.ಬಿ ಕಾಲೋನಿಯ ಶ್ರೀ ಗಾಯಿತ್ರಿದೇವಿ ಮಂದಿರ, ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರ, ಸೇರಿದಂತೆ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.