Chintamani: Varadadri Betta (Hill)
ಕಿಲೋಮೀಟರ್‌ಗಟ್ಟಲೇ ದೂರ ಹೋಗದೇ ಮತ್ತು ಹೆಚ್ಚು ಪ್ರಯಾಸಪಡದೇ ನಗರಪ್ರದೇಶದ ವ್ಯಾಪ್ತಿಯಲ್ಲೇ ಓಡಾಡಿ ಬೆಟ್ಟಗುಡ್ಡವನ್ನೇರಿದ ಅನುಭವ ಸವಿಯಬೇಕಿದ್ದರೆ ಹೆಚ್ಚು ಗೊಂದಲ ಅಥವಾ ಕಷ್ಟಪಡಬೇಕಿಲ್ಲ. ಚಿಂತಾಮಣಿ ಹೃದಯಭಾಗದಲ್ಲಿ ಆಕರ್ಷಣೀಯ ಕೇಂದ್ರವಾಗಿ ಕಾಣಸಿಗುವ ವರದಾದ್ರಿ ಬೆಟ್ಟವನ್ನೇರಿದರೆ ಸಾಕು, ಪರ್ವತಾರೋಹಿಯ ಅನುಭವ ಮತ್ತು ಆಧಾ್ಯತ್ಮಕ ನೆಮ್ಮದಿ ಎರಡೂ ಸಿಗುತ್ತದೆ.
ಚಿಂತಾಮಣಿ ನಗರದ ಭೌಗೋಳಿಕ ಪ್ರದೇಶದ ಸಂಪೂರ್ಣ ಚಿತ್ರಣ ನೋಡಬೇಕಿದ್ದರೂ ಮತ್ತು ದೂರದ ಗುಡ್ಡಬೆಟ್ಟಗಳತ್ತ ಕಣ್ಣು ಹಾಯಿಸಬೇಕಿದ್ದರೂ ವರದಾದ್ರಿ ಬೆಟ್ಟ ಸೂಕ್ತ ಜಾಗ. ಬೆಟ್ಟದ ಮೇಲಿರುವ ನರಸಿಂಹ ಅವತಾರದ ಆಕೃತಿ ಇಡೀ ನಗರವನ್ನು ನುಂಗುವಂತೆ ಕಂಡು ಬಂದರೆ, ಚಿಂತಾಮಣಿಯ ವಸತಿ ಪ್ರದೇಶ ಹೇಗೆಲ್ಲ ನಿರೀಕ್ಷೆಗೂ ಮೀರಿ ವಿಸ್ತಾರಗೊಳ್ಳುತ್ತಿದೆ ಎಂಬುದು ಅಚ್ಚರಿ ಮೂಡಿಸುತ್ತದೆ.
ಒಟ್ಟಿನಲ್ಲಿ ಚಿಂತಾಮಣಿಗೆ ಮುಖ್ಯ ಸಂಕೇತವಾಗಿರುವ ಈ ವರದಾದ್ರಿ ಬೆಟ್ಟವು ಇತರ ಗುಡ್ಡಬೆಟ್ಟಗಳಂತಲ್ಲ. ಬೇರೆಯೆಲ್ಲಾ ಗುಡ್ಡಬೆಟ್ಟಗಳು ಊರಾಚೆಯಿದ್ದರೆ, ಈ ಬೆಟ್ಟ ಮಾತ್ರ ವಸತಿ ಪ್ರದೇಶದ ಮಧ್ಯಭಾಗದಲ್ಲಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶ್ರೀನಿವಾಸಪುರ ರಸೆ್ತ, ಚಿಕ್ಕಬಳ್ಳಾಪುರ ರಸೆ್ತ ಸೇರಿದಂತೆ ಒಟ್ಟಾರೆ ಯಾವ ಸ್ಥಳದಲ್ಲೂ ನಿಂತರೂ ಈ ಕಪ್ಪು ಬಂಡೆಗಲ್ಲುಗಳಿಂದ ಕೂಡಿರುವ ಈ ಸುಂದರ ಬೆಟ್ಟದ ದರ್ಶನವಾಗುತ್ತದೆ.
ವರದಾದ್ರಿ ಬೆಟ್ಟಕ್ಕೆ ಮೆಟ್ಟಿಲುಮಾರ್ಗ ಏಕೈಕ ದಾರಿ. ಸುತ್ತಲೂ ಬಂಡೆಗಲ್ಲುಗಳು ಇರುವ ಕಾರಣ ಅವುಗಳ ಮೂಲಕ ಹತ್ತುವುದು ಕಷ್ಟ. ಅಪಾರ ಸಂಖ್ಯೆಯಲ್ಲಿ ಮೆಟ್ಟಿಲುಗಳಿದ್ದು ಸಾರ್ವಜನಿಕರು ಅಲ್ಲಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು ಹೆಚ್ಚು ಪ್ರಯಾಸವಿಲ್ಲದೇ ಬೆಟ್ಟವನ್ನೇರಬಹುದು. ಎರಡೂ ಬದಿಗಳಲ್ಲೂ ಗಿಡಮರ, ಬಂಡೆಗಲ್ಲುಗಳಿವೆ.
ಬೆಟ್ಟದ ಮೇಲೆ ವರದಾಂಜನೇಯಸ್ವಾಮಿ ದೇವಾಯವಿದ್ದು ಅದರ ಬದಿಯಲ್ಲೇ ಗರಡಿ ಯುವಕರ ಸಂಘದ ವರದಾಂಜನೇಯ ವ್ಯಾಯಾಮ ಶಾಲೆಯಿದೆ. ಅದರ ಎದುರುಗಡೆ ಪೊಲೀಸ್ ನಿಸ್ತಂತು (ವೈರ್‌ಲೆಸ್) ಕೇಂದ್ರವಿದೆ. ಅದರ ಮುಂಭಾಗದಲ್ಲಿ ಕೊಳವಿದ್ದು ಅದರ ಮಧ್ಯಭಾಗದಲ್ಲಿ ಕೃಷ್ಣ–ರುಕ್ಮಿಣಿಯ ಮೂರ್ತಿಗಳಿವೆ. ಮಕ್ಕಳಿಗೆಂದೇ ಆಟವಾಡಲು ಜಾರುಗುಂಡಿಯ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಭಕ್ತಾದಿಗಳು ಅಲ್ಲದೇ ಶಾಲಾಕಾಲೇಜು ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಸಮೇತ ಬಂದು ಓದಿಕೊಳ್ಳುತ್ತಾರೆ. ಪರೀಕ್ಷೆಗೆ ಸಿದ್ಧತೆ ಮಾಡಕೊಳ್ಳುತ್ತಾರೆ.
– ರಾಹುಲ ಬೆಳಗಲಿ