Gudibande : ಅಮಾನಿಬೈರಸಾಗರ ಕೆರೆಯ ದಡದ ಮೇಲಿನ ರಸ್ತೆ NH 7 ರಸ್ತೆಯಿಂದ SH 94 ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಏಕೈಕ ಮಾರ್ಗಗಿದ್ದು, ಸತತವಾಗಿ 40 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ದೊಡ್ಡ ಕೆರೆಯೆಂದೇ ಪ್ರಸಿದ್ಧಿಯಾಗಿರುವ ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೆರೆಯ ಕೋಡಿಯು ರಭಸವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆ ದಡದಲ್ಲಿ ಭೂಕುಸಿತದಿಂದ ರಸ್ತೆಯಲ್ಲಿ ದೊಡ್ಡ ಗುಣಿಗಳು ಕಾಣಿಸಿಕೊಂಡಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.
ಕಳೆದ ವಾರ ನವಿಲಗುರ್ಕಿ ಬಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ದ್ವಿಚಕ್ರವಾಹನದಲ್ಲಿ ಸಂಚಾರಿಸುವಾಗ ಕೊಚ್ಚಿ ಹೋಗಿದ್ದರು ಹಾಗೆಯೇ ಮಂಗಳವಾರ ಸಂಜೆ ಇದೇ ಕೋಡಿಯಲ್ಲಿ ದ್ವಿಚಕ್ರವಾಹನದಿಂದ ಆಯತಪ್ಪಿ ಬಿದ್ದಿದ್ದ ಶಿಕ್ಷಕರೊಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಕೋಡಿ ಹೋಗುವ ರಸ್ತೆಯಲ್ಲಿ ದ್ವಿಚಕ್ರವಾಹನ ಹಾಗೂ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು ₹18 ಲಕ್ಷ ವೆಚ್ಚದಲ್ಲಿ ಸ್ಟೀಲ್ ತಡೆಗೊಡೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ. ಕೋಡಿಯಲ್ಲಿ ನೀರಿನ ಹರಿವು ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಮಾನಿಬೈರಸಾಗರ ಕೆರೆಯ ಬಳಿ ಸೇತುವೆ ನಿರ್ಮಾಣ ಮಾಡಲು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದು ಅದರ ನೀಲನಕ್ಷೆ ಹಾಗೂ ಅಂದಾಜು ಪಟ್ಟಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ರಾಮಲಿಂಗರೆಡ್ಡಿ ಹೇಳಿದರು.