Chintamani : ಶೃಂಗೇರಿ ಮಠದ (Sri Sri Jagadguru Shankaracharya Mahasamsthanam, Dakshinamnaya Sri Sharada Peetham, Sringeri) ವಿಜಯ ಯಾತ್ರೆಯ ಅಂಗವಾಗಿ ಚಿಂತಾಮಣಿ ನಗರಕ್ಕೆ ಶೃಂಗೇರಿ (Sringeri) ಮಠದ ವಿಧುಶೇಖರ ಭಾರತಿ ಸ್ವಾಮೀಜಿ (Sri Sri Vidhushekhara Bharati Mahaswamiji) ಆಗಮಿಸಿ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿರುವ ಶಂಕರ ಕ್ಯಾನ್ಸರ್ ಫೌಂಡೇಶನ್ (Sri Shankara Cancer Foundation) ಆಸ್ಪತ್ರೆಯ ವಿಶೇಷ ಸೌಲಭ್ಯಗಳನ್ನು ಉದ್ಘಾಟಿಸಿದರು ಮತ್ತು ನಗರದ ಬ್ರಾಹ್ಮಣ ಬೀದಿಯಲ್ಲಿರುವ ಶಂಕರ ಮಠದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ಶಂಕರಾಚಾರ್ಯರು (Shankaracharya) ಮಾನವನ ಅಜ್ಞಾನವನ್ನು ಹೋಗಲಾಡಿಸಿ ಮೋಕ್ಷವನ್ನು ಪಡೆಯಲು ಬೇಕಾದ ಧರ್ಮ ಮಾರ್ಗವನ್ನು ಬೋಧಿಸಿದ್ದಾರೆ . ತಂದೆ-ತಾಯಿಗಳು ಹಾಗೂ ಹಿರಿಯರು ಮನೆಗಳಲ್ಲಿ ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಸಂಸ್ಕಾರವನ್ನು ಕಲಿಸಿ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಬೇಕು ಎಂದು ವಿಧುಶೇಖರ ಭಾರತಿ ಸ್ವಾಮೀಜಿ ತಿಳಿಸಿದರು.
ರಾಘವೇಂದ್ರಸ್ವಾಮಿ ಮಠದಿಂದ ಅಜಾದ್ ಚೌಕಕ್ಕೆ ಆಗಮಿಸಿದ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಅಜಾದ್ ಚೌಕದಿಂದ ವಿವಿಧ ಕಲಾತಂಡಗಳೊಂದಿಗೆ ಶೋಭಾಯಾತ್ರೆಯಲ್ಲಿ ಶಂಕರ ಮಠಕ್ಕೆ ತಲುಪಿದರು. ಶೋಭಾಯಾತ್ರೆ ದೊಡ್ಡಪೇಟೆಯ ಜಾಮಿಯಾ ಮಸೀದಿ ಬಳಿಗೆ ಬಂದಾಗ ಮಸೀದಿ ಸಮಿತಿಯ ಮುಸಲ್ಮಾನ ಮುಖಂಡರು ಶ್ರೀಗಳಿಗೆ ಫಲ-ಪುಷ್ಪ ತಾಂಬೂಲಗಳನ್ನು ಸಮರ್ಪಿಸಿ ಭಾವೈಕ್ಯತೆ ಸಾರಿದರು.