Appegowdanahalli, Sidlaghatta : ತೆಲುಗು ಮಿಶ್ರಿತ ಕನ್ನಡವನ್ನೇ ಅತಿ ಹೆಚ್ಚು ಮಾತನಾಡುವ ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಶಿಡ್ಲಘಟ್ಟದಲ್ಲಿ ಒಂಬತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆಗಳು ನಡೆದಿವೆ.
ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬಂದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಮೊಟ್ಟ ಮೊದಲ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಈವರೆಗೂ ಎಂಟು ತಾಲೂಕು ಸಮ್ಮೇಳನ ಹಾಗು ಎರಡು ಜಿಲ್ಲಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಿಡ್ಲಘಟ್ಟದ ಜನತೆ ಮತ್ತೊಮ್ಮೆ ಕನ್ನಡಮ್ಮನ ತೇರು ಎಳೆಯಲು ತುದಿಗಾಲಲ್ಲಿ ನಿಂತಿದ್ದು ಇದೇ ಮೊಟ್ಟ ಮೊದಲ ಭಾರಿಗೆ ಗ್ರಾಮೀಣ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಿದ್ದು ಸಡಗರ ಸಂಭ್ರಮದಿಂದ ಸಿದ್ದತೆಗಳನ್ನು ನಡೆಸಲಾಗುತ್ತಿದೆ.
ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು 9 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದು ಸಾಹಿತಿ, ತೋಟಗಾರಿಕಾ ತಜ್ಞ, ಇತಿಹಾಸ ಸಂಶೋದಕ, ವಾಸ್ತುಶಿಲ್ಪ ಅಧ್ಯಯನಾಸಕ್ತ, ಪರಿಸರ ತಜ್ಞ, ಅನುವಾದಕರು. ಆಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸೇವೆಯನ್ನು, ಕೊಡುಗೆಯನ್ನು ನೀಡಿರುವ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ ಸಮ್ಮೇಳನಾಧ್ಯಕ್ಷತೆಯಲ್ಲಿ ತಾಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಆವರಣದಲ್ಲಿ ಇದೇ ಡಿ 12 ರ ಸೋಮವಾರ ನಡೆಯಲಿದ್ದು ಬೆಳಗ್ಗೆ ೮ ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಶುರುವಾಗಲಿದೆ.
ರಾಷ್ಟ್ರಧ್ವಜವನ್ನು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ನಾಡಧ್ವಜವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ಪರಿಷತ್ತಿನ ಧ್ವಜವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಆರೋಹಣ ಮಾಡಲಿದ್ದಾರೆ. ರೈತಗೀತೆಯನ್ನು ಕೆಂಪಣ್ಣ ಮತ್ತು ತಂಡ, ನೆರವೇರಿಸಿದರೆ ನಾಡಗೀತೆಯನ್ನು ಟಿ.ನಾರಾಯಣಸ್ವಾಮಿ ತಂಡ ನಡೆಸಿಕೊಡುವರು.
ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಬೆಳಿಗ್ಗೆ 9:30 ಗಂಟೆಗೆ ಅಪ್ಪೇಗೌಡನಹಳ್ಳಿ ಗ್ರಾಮದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಮುಖ್ಯಧ್ವಾರದಿಂದ ಆಯೋಜಿಸಲಾಗಿದೆ. ಮೆರವಣಿಗೆಯ ಚಾಲನೆಯನ್ನು ಹಂಡಿಗನಾಳ ಗ್ರಾ.ಪಂ ಅಧ್ಯಕ್ಷ ಮುನಿರೆಡ್ಡಿ ಹಾಗು ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 10:30 ಗಂಟೆಗೆ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ’ ಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿ.ಮುನಿಯಪ್ಪ ವಹಿಸಲಿದ್ದು ಸಮ್ಮೇಳನದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜ್ (ಎಂಟಿಬಿ) ನೆರವೇರಿಸಲಿದ್ದಾರೆ.
ಸಮ್ಮೇಳನಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರೆ ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ಸಂಸದ ಎಸ್.ಮುನಿಸ್ವಾಮಿ ನೆರವೇರಿಸುವರು.
ನಿಕಟಪೂರ್ವ ಅಧ್ಯಕ್ಷೆ ಯಶೋದಮ್ಮ ಅವರಿಂದ ಪರಿಷತ್ತಿನ ಧ್ವಜ ಹಸ್ತಾಂತರಿಸಲಾಗುವುದು. ನಂತರ ಸಮ್ಮೇಳನಾಧ್ಯಕ್ಷರ ಭಾಷಣ ಇರುತ್ತದೆ.
ಮಧ್ಯಾಹ್ನ 1:20 ಕ್ಕೆ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಹಾಗು ಚುಸಾಪ ಜಿಲ್ಲಾದ್ಯಕ್ಷ ಚಲಪತಿಗೌಡ ವಹಿಸಲಿದ್ದಾರೆ. ಸುಮಾರು ೧೫ ಕ್ಕೂ ಹೆಚ್ಚು ಕವಿಗಳು ವಿವಿಧ ಕವನಗಳನ್ನು ವಾಚಿಸುವರು.
ಮಧ್ಯಾಹ್ನ 2:20 ಕ್ಕೆ ಕರ್ನಾಟಕ ಏಕೀಕರಣ ಇತಿಹಾಸ ಎಂಬುದರ ಬಗ್ಗೆ ವಿಚಾರಗೋಷ್ಠಿ ನಡೆಯಲಿದ್ದು ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ, ಅಧ್ಯಕ್ಷತೆಯನ್ನು ವಹಿಸುವರು.
ಮದ್ಯಾಹ್ನ 3 ಗಂಟೆಗೆ ತೋಟಗಾರಿಕಾ ಆಧುನಿಕ ಬೆಳೆಗಳು ಎಂಬ ವಿಚಾರವಾಗಿ ವಿಚಾರಗೋಷ್ಠಿ ನಡೆಯಲಿದ್ದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ರಮೇಶ್ ಅಧ್ಯಕ್ಷತೆಯನ್ನು ವಹಿಸುವರು.
ಮದ್ಯಾಹ್ನ 3:40 ಗಂಟೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ವಿಚಾರವಾಗಿ ನಡೆಯಲಿರುವ ಗೋಷ್ಠಿಗೆ ನಿವೃತ್ತ ಉಪವಿಭಾಗಾಧಿಕಾರಿ ಕೆ.ಎನ್.ರಾಮಾಂಜಿನಪ್ಪ ಅಧ್ಯಕ್ಷತೆ ವಹಿಸುವರು.
ಸಂಜೆ 4:40 ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಅಧ್ಯಕ್ಷತೆಯನ್ನು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ವಹಿಸುವರು.
ಸಮಾರೋಪ ಸಮಾರಂಭವನ್ನು ಸಂಜೆ 5:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ರಾಜಣ್ಣ, ಎಸ್ ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು), ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ಗೌಡ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಸಂಜೆ 6:30 ಗಂಟೆ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ರಸಸಂಜೆ ಕಾರ್ಯಕ್ರಮ, ಮತ್ತು ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.