Sidlaghatta : ಸಮುದಾಯ ಸಹಾಯಕರ ದಿನಾಚರಣೆ ಪ್ರಯುಕ್ತ ಯೂರೋ ಕಿಡ್ಸ್ ಶಾಲೆ ಮತ್ತು ಬಿಕೆಆರ್ ಆಕಾಡೆಮಿಯ ಮಕ್ಕಳು, ಶಿಕ್ಷಕರು ಹಾಗೂ ಸದಸ್ಯರು ಸಮುದಾಯದಲ್ಲಿ ಕಾರ್ಯನಿರ್ವಹಿಸುವ ಸಹಾಯಕರಿಗೆ ಶ್ಲಾಘನೆ ಸಲ್ಲಿಸಿ ಧನ್ಯವಾದ ಅರ್ಪಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಕಚೇರಿ, ಜೆಎಂಎಫ್‌ಸಿ ನ್ಯಾಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ಹಲವೆಡೆ ಮಕ್ಕಳಿಂದ ಭಾವನಾತ್ಮಕ ಗೌರವ ಸಲ್ಲಿಸಲಾಯಿತು.
ವೈದ್ಯರು, ನರ್ಸ್‌ಗಳು ತೊಡುವ ಪೋಷಾಕು ಧರಿಸಿ, ಸ್ಟೆತಸ್ಕೋಪ್ ಹಾಕಿಕೊಂಡ ಮಕ್ಕಳ ತಂಡವು ಆಸ್ಪತ್ರೆ ಭೇಟಿ ನೀಡಿದ್ದು ವಿಶೇಷ ಗಮನ ಸೆಳೆಯಿತು. ನಂತರ ನ್ಯಾಯಾಧೀಶರು, ಅಗ್ನಿಶಾಮಕ ಸಿಬ್ಬಂದಿ, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಅವರ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ಇದೇ ವೇಳೆ ಮಕ್ಕಳನ್ನು ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ, ತಮ್ಮ ಕೆಲಸದ ಮಹತ್ವ ಮತ್ತು ಅನುಭವಗಳನ್ನು ಹಂಚಿಕೊಂಡರು.
ಶಾಲಾ ಮಕ್ಕಳು ಹಾಗೂ ಬಿಕೆಆರ್ ಆಕಾಡೆಮಿ ಸದಸ್ಯರು ಸಮುದಾಯ ಸೇವಕರನ್ನು ಗೌರವಿಸಿದ ಈ ಅನನ್ಯ ಕಾರ್ಯಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.