Talakayalabetta, Sidlaghatta : ಗಿಡ ಮರಗಳನ್ನು ನೆಡುವುದರ ಜೊತೆಗೆ ಅವುಗಳ ಪೋಷಣೆ ಬಗ್ಗೆ ಗಮನ ಹರಿಸುವುದು ಪ್ರತಿಯೊಬ್ಬರ ಧ್ಯೇಯ ಆಗಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ತಾಲೂಕಿನ ತಲಕಾಯಲಬೆಟ್ಟ ಗ್ರಾ.ಪಂ ವ್ಯಾಪ್ತಿಯ ಗಾಂಡ್ಲಚಿಂತೆ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಹತ್ತಿರ ಶನಿವಾರ ಅರಣ್ಯ ಇಲಾಖೆ ಹಾಗು ಯುವಶಕ್ತಿ ಸಂಘಟನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶುದ್ಧ ಗಾಳಿ, ನೆರಳು ನೀಡುವ ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯ. ಆದ್ದರಿಂದ ನಾವು ವೃಕ್ಷ ರಕ್ಷಣೆಯ ತೀರ್ಮಾನಗಳನ್ನು ಕೈಗೊಳ್ಳಬೇಕು. ಜೀವ ಸಂಕುಲಕ್ಕೆ ಬದುಕಲು ಅತ್ಯಾವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಪರಿಸರದಲ್ಲಿ ವೃದ್ಧಿಯಾಗಲು ಪ್ರತಿಯೊಬ್ಬರು ಸಸಿ ನೆಟ್ಟು ನೀರೆರೆದು ಬೆಳೆಸಬೇಕು. ಇದರಿಂದ ಮುಂದಿನ ಫೀಳಿಗೆಗೆ ಉತ್ತಮ ಪರಿಸರ ನೀಡಿದ ಪುಣ್ಯ ಲಭಿಸುತ್ತದೆ ಎಂದರು.
ಪ್ರತಿಯೊಬ್ಬರು ನೆಟ್ಟಿರುವ ಸಸಿಯನ್ನು ಬೆಳೆಯುವಂತೆ ನೋಡಿಕೊಳ್ಳುವ ಮೂಲಕ ಮರವೊಂದನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡಬೇಕು. ವಸತಿ ಪ್ರದೇಶದ ವಿಸ್ತಾರ ಹೆಚ್ಚುತ್ತಿರುವುದರಿಂದ ಮರಗಿಡಗಳಿದ್ದ ಜಾಗವನ್ನೆಲ್ಲ ಸಿಮೆಂಟ್ ಕಟ್ಟಡಗಳು ಆಕ್ರಮಿಸಿಕೊಳ್ಳುತ್ತಿವೆ. ಇದರ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ, ಬೀಳುವ ಮಳೆಯ ಪ್ರಮಾಣ ತಗ್ಗಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಎಲ್ಲರೂ ಎಚ್ಚೆತ್ತಿಕೊಂಡು ಗಿಡ ಮರಗಳನ್ನು ಬೆಳೆಸಿ ಎಂದು ಕರೆ ನೀಡಿದರು.
ತಲಕಾಯಲಬೆಟ್ಟ ಸುತ್ತಮುತ್ತಲಿನ ೬೨ ಎಕರೆ ಅರಣ್ಯ ಪ್ರದೇಶದಲ್ಲಿ ಸುಮಾರು ೬೫೦೦ ಕ್ಕೂ ಹೆಚ್ಚಿನ ಗಿಡಗಳನ್ನು ಶನಿವಾರ ನೆಡಲಾಯಿತು.
ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್, ಆರ್ಎಫ್ಓ ಸುಧಾಕರ್, ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ, ಮಾಜಿ ತಾ.ಪಂ ಸದಸ್ಯ ಬಚ್ಚನಹಳ್ಳಿ ನಾರಾಯಣಸ್ವಾಮಿ, ಯುವ ಮುಖಂಡರಾದ ಬಿ.ಶಿವಕುಮಾರ್, ಗಂಜಿಗುಂಟೆ ಮೂರ್ತಿ, ಶಿವಪ್ರಕಾಶರೆಡ್ಡಿ, ಶಿವಣ್ಣ, ಎಎಫ್ಓ ಜಯಚಂದ್ರ, ಮತ್ತಿತರರು ಹಾಜರಿದ್ದರು.