Sidlaghatta : ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 174 ಪ್ರಕರಣಗಳು ಇತ್ಯರ್ಥಗೊಂಡು 1 ಕೋಟಿ 31 ಲಕ್ಷ 67 ಸಾವಿರ 478 ರೂ ಪಾವತಿಸಲಾಗಿದೆ.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆಹನುಮಂತಪ್ಪ, ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ ಮತ್ತು ಅಪರ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಅಲ್ಬೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ವಿವಿಧ ರೀತಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು
ಚೆಕ್ ಪ್ರಕರಣಗಳು ೪೦ ಇತ್ಯರ್ಥಗೊಂಡು, 1 ಕೋಟಿ 07 ಲಕ್ಷ 61 ಸಾವಿರ ರೂ, 134 ಸಿವಿಲ್ ಹಾಗು ಕ್ರಿಮಿನಲ್ ವ್ಯಾಜ್ಯಗಳಿಂದ 24 ಲಕ್ಷ 6 ಸಾವಿರ 478 ರೂ (46 ಬ್ಯಾಂಕುಗಳ ವ್ಯಾಜ್ಯ ಪೂರ್ವ ಪ್ರಕರಣಗಳಿಂದ 29 ಲಕ್ಷ 28 ಸಾವಿರ 710 ರೂಗಳು) ಸೇರಿದಂತೆ ಒಟ್ಟಾರೆಯಾಗಿ 1,31,67,478 ರೂಗಳು ಪಾವತಿಯಾದವು.
ಸಂಧಾನಕಾರರಾಗಿ ವಕೀಲರಾದ ಕೆ.ಎಂ.ವಿಶ್ವನಾಥ್, ಸಿ.ಜಿ.ಭಾಸ್ಕರ್, ಎಚ್.ಎನ್.ಕೃಷ್ಣಮೂರ್ತಿ ಹಾಜರಿದ್ದರು.