Sidlaghatta : ಪ್ರತಿನಿತ್ಯ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರು ಮಾನಸಿಕ ಹಾಗು ದೈಹಿಕವಾಗಿ ಸದೃಡಗೊಳ್ಳಲು ಕ್ರೀಡೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯವನ್ನು ಮತ್ತಷ್ಟು ವೃದ್ದಿಸಿಕೊಳ್ಳಬೇಕು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸ್ಪರ್ದೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೊತೆಗೆ ಮಾನಸಿಕ ಹಾಗು ದೈಹಿಕವಾಗಿ ಸದೃಡವನ್ನಾಗಿಸುತ್ತದೆ. ಸರ್ಕಾರಿ ನೌಕರರು ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ದಿನದ ಒಂದು ಗಂಟೆಯಾದರೂ ವ್ಯಾಯಾಮ, ದೈಹಿಕ ಚಟುವಟಿಕೆಗಳಿಗಾಗಿ ಮೀಸಲಿಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಮಾತನಾಡಿ ಕ್ರೀಡೆಗಳು ಮಾನವನ ಜೀವನಕ್ಕೆ ಬಹಳ ಅವಶ್ಯಕವಾಗಿವೆ, ನಮ್ಮ ದೇಹಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತವೆ, ಆಟಗಳು ಮನುಷ್ಯರನ್ನು ತಾಜಾಗೊಳಿಸುತ್ತವೆ, ಕ್ರೀಡಾಕೂಟಗಳು ನಮ್ಮೆಲ್ಲರ ಆರೋಗ್ಯಕ್ಕೆ ಟಾನಿಕ್‌ನಂತೆ ಕಾರ್ಯನಿರ್ವಹಿಸುತ್ತವೆ. ಹಾಗೂ ಸದೃಡ ಮತ್ತು ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮುನಿರಾಜು, ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸಲುನಾಯ್ಡು, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತೋಟಗಾರಿಕೆ ನಿರ್ದೇಶಕ ರಮೇಶ್, ಕೃಷಿ ಸಹಾಯಕ ನಿರ್ದೇಶಕಿ ವೀಣಾ, ತಾಲ್ಲೂಕು ಆರೋಗ್ಯಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯಲು, ಬಿಸಿಎಂ ಅಧಿಕಾರಿ ನಾರಾಯಣಪ್ಪ, ಸಮಾಜಕಲ್ಯಾಣಾಧಿಕಾರಿ ಜಗದೀಶ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿ ಭಾಗವಹಿಸಿದ್ದರು.