Sidlaghatta : ದೇಶದಲ್ಲಿನ ನಗರಗಳ ಅಭಿವೃದ್ಧಿಗಾಗಿ 2021 ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್‌ಫರ್ಮೇಷನ್ (AMRUT) 2.0 ಪಂಚವಾರ್ಷಿಕ ಯೋಜನೆಯಲ್ಲಿ ಈ ಬಾರಿ ಶಿಡ್ಲಘಟ್ಟವೂ ಸೇರ್ಪಡೆಗೊಂಡಿದೆ.
“ಅಮೃತ್ 2” ಯೋಜನೆಯಡಿಯಲ್ಲಿ ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಇದೀಗ ಒಪ್ಪಿಗೆ ಸಿಕ್ಕಿದೆ.
ಶಾಸಕ ಬಿ.ಎನ್.ರವಿಕುಮಾರ್ ಅವರು ಶಾಸಕರಾಗುತ್ತಿದ್ದಂತೆ ನಗರದ ಅಭಿವೃದ್ಧಿಗೆ ಮತ್ತು ಜನರ ಕುಡಿಯುವ ನೀರಿನ ಅಗತ್ಯತೆಗೆ ದೂರದೃಷ್ಟಿ ಯೋಜನೆ ಬೇಕೆಂದು “ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ” ಕುರಿತಂತೆ ಅವರ ಪಕ್ಷದ ವರಿಷ್ಠರು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಗಮನಕ್ಕೆ ತಂದಿದ್ದರು.
ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಎಚ್.ಡಿ ದೇವೇಗೌಡರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿದ್ದ ಹರ್ದೀಪ್ ಸಿಂಗ್ ಪುರಿ ಅವರಿಗೆ 2023ರ ಜುಲೈನಲ್ಲಿ ಪತ್ರ ಬರೆದು. ಶಿಡ್ಲಘಟ್ಟ ನಗರಕ್ಕೆ ಬೇಕಿರುವ ಅಗತ್ಯ ಸೌಲಭ್ಯಗಳ ಬಗ್ಗೆ ವಿವರಿಸಿ, “ಅಮೃತ್ 2” ಯೋಜನೆಯಡಿಯಲ್ಲಿ ಶಿಡ್ಲಘಟ್ಟದ ಕುಡಿಯುವ ನೀರಿನ ಯೋಜನೆಯನ್ನು ಸೇರಿಸುವಂತೆ ವಿನಂತಿಸಿದ್ದರು.
“ಏಷ್ಯಾ ಖಂಡದಲ್ಲೇ ಎರಡನೇ ಅತ್ಯಂತ ದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಖ್ಯಾತಿ ಪಡೆದಿರುವ ಶಿಡ್ಲಘಟ್ಟ ನಗರ ವಾಣಿಜ್ಯ ನಗರವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಗರಕ್ಕೆ ಹತ್ತಿರದಲ್ಲಿಯೇ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಇದೆ. ನಗ್ರಸಭೆಯಾಗಿ ಮೇಲ್ದರ್ಜೆಗೇರಿರುವ ಶಿಡ್ಲಘಟ್ಟ ನಗರ “ದಾಬಸ್ ಪೇಟೆ- ಚಿಕ್ಕಬಳ್ಳಾಪುರ-ಶಿಡ್ಲಘಟ್ಟ-ಚಿಂತಾಮಣಿ” ಹೆದ್ದಾರಿಯಲ್ಲಿದೆ. ಅಭಿವೃದ್ಧಿ ಹಾದಿಯಲ್ಲಿರುವ ಈ ನಗರದ ಬೆಳವಣಿಗೆಗೆ ಪೂರಕವಾಗಿ ಶಿಡ್ಲಘಟ್ಟ ನಗರಕ್ಕೆ ಅಗತ್ಯ ಕುಡಿಯುವ ನೀರಿನ ಪೂರೈಕೆಯ ಯೋಜನೆ ಅತ್ಯಗತ್ಯವಾಗಿದೆ. ಅಮೃತ್ 2” ಯೋಜನೆಯಡಿಯಲ್ಲಿ “ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ” ಆದ್ಯತೆಯನ್ನು ನೀಡಿ ಸೇರಿಸಬೇಕು” ಎಂದು ಎಚ್.ಡಿ.ದೇವೇಗೌಡರು ಪತ್ರದ ಮೂಲಕ ಮನವಿ ಮಾಡಿದ್ದರು.
ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ “ಅಮೃತ್ 2.0” ಯೋಜನೆಯಡಿಯಲ್ಲಿ ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಯೋಜನೆಗೆ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಒಟ್ಟು 87 ಕೋಟಿ ರೂ ಅನುದಾನ ನೀಡಿದ್ದು ಮೊದಲನೇ ಭಾಗವಾಗಿ ಈಗಾಗಲೇ ಸುಮಾರು 75 ಕೋಟಿ ರೂ ಅಷ್ಟು ಹಣ ಬಿಡುಗಡೆಯಾಗಿರುತ್ತದೆ. ಪ್ರಸ್ತುತ ವಿವರವಾದ ಯೋಜನಾ ವರದಿ (ಡಿ.ಪಿ.ಆರ್) ಅಂತಿಮ ಹಂತದಲ್ಲಿದ್ದು ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ.