S Devaganahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾಮಸಮುದ್ರ ಕೆರೆ ಅಭಿವೃದ್ಧಿ ಗ್ರಾಮ ಪಂಚಾಯಿತಿ ಉಪ ಸಮಿತಿ ಹಾಗೂ ಅಚ್ಚುಕಟ್ಟು ರೈತರ ಸಮ್ಮುಖದಲ್ಲಿ 2025ರ ಗ್ರಾಮ ಸಭೆ ಹಾಗೂ ವಿಶೇಷ ಸಭೆ ಜರುಗಿತು.
ಸಭೆಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ.ಓಬಳಪ್ಪ, ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಅವೈಜ್ಞಾನಿಕವಾಗಿದೆ ಎಂದು ಅಭಿಪ್ರಾಯಪಟ್ಟರು. ಶಿಡ್ಲಘಟ್ಟದಿಂದ 35 ಕಿ.ಮೀ ದೂರದಲ್ಲಿರುವ ರಾಮಸಮುದ್ರ ಕೆರೆಯಿಂದ ನೀರು ಸರಬರಾಜು ಮಾಡುವುದು ಅನುಕೂಲಕರವಲ್ಲ. ಇದರಿಂದ ಸ್ಥಳೀಯ ರೈತರು ಮತ್ತು ಹೈನುಗಾರಿಕೆ ಮಾಡುವ ಜನರಿಗೆ ನೀರಿನ ಕೊರತೆ ಉಂಟಾಗಲಿದೆ. ಈ ಕೆರೆ 1889ರಲ್ಲಿ ಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ದಿವಾನ ಕೆ.ಶೇಷಾದ್ರಿ ಅಯ್ಯರ್ ಕೃಷಿ ಬಳಕೆಗೆಂದು ನಿರ್ಮಿಸಿದ್ದು, ಈ ನೀರು ಇಲ್ಲಿಯ ರೈತರ ಬದುಕಿಗೆ ಅವಿಭಾಜ್ಯವಾಗಿದೆ ಎಂದು ತಿಳಿಸಿದರು.
ಎಸ್.ದೇವಗಾನಹಳ್ಳಿ, ಎಸ್.ಗುಂಡ್ಲಹಳ್ಳಿ, ಯರ್ರಾನಾಗೇನಹಳ್ಳಿ, ಎಸ್.ಕುರಬರಹಳ್ಳಿ, ಸತ್ಯಸಾಯಿ ನಗರ, ಗಡಿಮಿಂಚೇನಹಳ್ಳಿ, ವರದಾಗನಹಳ್ಳಿ, ಮಂಡಿಕಲ್ ಹೋಬಳಿಯ ಬೋಯನಹಳ್ಳಿ ಸೇರಿದಂತೆ ಸುಮಾರು 1500 ಎಕರೆ ಪ್ರದೇಶ ಈ ಕೆರೆಯಿಂದ ನೀರು ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದೆ. 2025ರ ಜೂನ್-ಜುಲೈ ತಿಂಗಳಿನಲ್ಲಿ ಬೆಳೆಗಳಿಗೆ ನೀರು ಬಿಡಲು ಜಿಲ್ಲಾಡಳಿತ ತಕ್ಷಣವೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ನಮ್ಮ ಪೂರ್ವಜರು ನಿರ್ಮಿಸಿದ ಈ ಕೆರೆ ನಮ್ಮ ಪ್ರದೇಶದ ರೈತರ ಜೀವನಾಧಾರವಾಗಿದೆ. ಕೃಷಿ ಮತ್ತು ಹೈನುಗಾರಿಕೆ ನಡೆಸಲು ಇದೊಂದೇ ಜಲಮೂಲವಾಗಿದೆ. ಇದರಿಂದ ಸ್ಥಳೀಯ ಉದ್ದಿಮೆಗಳು ನಡೆಸಲು ಸಹಾಯವಾಗುತ್ತಿದ್ದು, ಈ ನೀರು ಬೇರೆಡೆ ಒಯ್ಯುವುದನ್ನು ವಿರೋಧಿಸುತ್ತೇವೆ ಎಂದರು.
ಸಾದಲಿ ಹೊಸ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಜಿ.ವಿ.ತಿಮ್ಮರಾಜು ಮಾತನಾಡಿ, “ಯಾವುದೇ ಕಾರಣಕ್ಕೂ ಶಿಡ್ಲಘಟ್ಟ ನಗರಕ್ಕೆ ನಮ್ಮ ಕೆರೆಯಿಂದ ಕುಡಿಯುವ ನೀರು ಬಿಡುವುದಿಲ್ಲ. ಸರ್ಕಾರ ಈ ಯೋಜನೆ ಕೈಬಿಡದಿದ್ದರೆ ಜಿಲ್ಲಾಡಳಿತದ ಮುಂದೆ ಭಾರಿ ಪ್ರತಿಭಟನೆ ನಡೆಸುವೆವು” ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮದ್ದಿರೆಡ್ಡಿ, ಅಶ್ವತ್ತಪ್ಪ, ಸಂಘದ ಅಧ್ಯಕ್ಷೆ ಸುನಂದಮ್ಮ ವಿಜಯಕುಮಾರ, ಉಪಾಧ್ಯಕ್ಷ ವೇಣುಗೋಪಾಲ್, ಯರ್ರಾನಾಗೇನಹಳ್ಳಿ ಗಂಗಾಧರ್, ಭೂ ವಿಜ್ಞಾನಿ ಡಿ.ಎಲ್.ನಾಗೇಶ್, ಮುಖಂಡರಾದ ಜಿ.ವಿ.ವೆಂಕಟಛಲಪತಿ, ಬಿ.ಎಲ್.ಮಂಜುನಾಥ್, ಎನ್.ಮುನಿವೆಂಕಟಸ್ವಾಮಿ, ರಾಮದಾಸ್, ರಮೇಶ್, ದೇವರಾಜ್, ಮುನಿವೆಂಕಟಪ್ಪ, ಬೋಯನಹಳ್ಳಿ ಹನುಮಂತ್, ತೂಮಕುಂಟೆ ರಾಮಪ್ಪ, ಪುಸಾಗನದೊಡ್ಡಿ ಪಿ.ಎನ್.ಗಂಗರಾಜು, ಶ್ರೀನಿವಾಸಪ್ಪ, ಬಿ.ಚಂದ್ರಶೇಖರ್, ಜಿ.ಎ.ಲಕ್ಷ್ಮೀಪತಿ, ಜಿ.ದೇವರಾಜ್, ಕಾರ್ಯದರ್ಶಿ ಡಿ.ವಿ.ಪ್ರಸಾದ್ ಹಾಜರಿದ್ದರು.