Bagepalli : ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪ್ರೊ.ನಂಜುಂಡಸ್ವಾಮಿ ಬಣ)ಯ ತಾಲ್ಲೂಕು ಮುಖಂಡರು ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ₹20 ಸಾವಿರ, ಮನೆ ಕಳೆದುಕೊಂಡವರಿಗೆ ₹30 ಸಾವಿರ ಹಾಗೂ ದೆಹಲಿಯ ರೈತರ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಾಗೇಪಲ್ಲಿ ನಗರದ ಡಾ.ಎಚ್.ಎನ್.ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ, ಮಳೆಯಿಂದ ಹಾನಿಗೊಳಗಾದ ರೈತರಿಗೆ, ಮನೆ ಹಾನಿಯಾದವರಿಗೆ ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾ ಮೆರವಣಿಗೆ ಮಾಡಿ ,ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಳೆಯಿಂದ ತಾಲ್ಲೂಕಿನಲ್ಲಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿದ್ದು ರೈತ ಕುಟುಂಬ ಸಂಕಷ್ಟದಲ್ಲಿದೆ. ಬೆಳೆ ನಷ್ಟದ ಬಗ್ಗೆ ಇದುವರೆಗೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಕೂಡಲೇ ಹಿರಿಯ ಅಧಿಕಾರಿಗಳು ಗಮನ ಹರಿಸಿ ರೈತರಿಂದ ಮಾಹಿತಿ ಸಂಗ್ರಹಿಸಿ, ಬೆಳೆ ನಷ್ಟ ಹಾಗೂ ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಬಿ.ಜಿ.ಹಳ್ಳಿನಾರಾಯಣ ಸ್ವಾಮಿ ಆಗ್ರಹಿಸಿದರು.
ರೈತರಿಗೆ ಬೆಳೆ ವಿಮೆ ನೀಡಿ ರೈತ ಮಕ್ಕಳ ಶಾಲಾ ಶುಲ್ಕಗಳನ್ನು ಸರ್ಕಾರವೇ ಭರಿಸಬೇಕು. ತಾಲ್ಲೂಕಿನಲ್ಲಿ ಬೆಳೆ ನಷ್ಟ ರೈತರಿಗೆ ಪ್ರತಿ ಎಕರೆಗೆ ₹20 ಸಾವಿರ, ಜಮೀನು ಹಾಳಾದವರಿಗೆ ₹30 ಸಾವಿರ, ದೆಹಲಿಯಲ್ಲಿ ಹೋರಾಟ ಮಾಡಿ ಹುತಾತ್ಮರಾದ ರೈತರ ಕುಟುಂಬಗಳಿಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಶ್ರೀನಿವಾಸಲು ಒತ್ತಾಯಿಸಿದರು.
ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಿ.ಎ.ದಿವಾಕರ್ , ತಾಲ್ಲೂಕಿನಲ್ಲಿ 150ಕ್ಕೂ ಹೆಚ್ಚು ಮನೆ ಹಾನಿಯಾದವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು ಬೆಳೆ ನಷ್ಟದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಬೆಳೆ ನಷ್ಟ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಎಸ್.ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕಾರ್ಯಾಧ್ಯಕ್ಷ ಎಚ್.ಎನ್.ಸುಬ್ಬಿರೆಡ್ಡಿ, ಉಪಾಧ್ಯಕ್ಷ ಎನ್.ಶ್ರೀನಿವಾಸ್, ಕಾರ್ಯದರ್ಶಿ ಜಾಕೀರ್ ಅಹಮದ್, ಖಜಾಂಚಿ ಕೆ.ಬೈರಾರೆಡ್ಡಿ, ಸಂಚಾಲಕ ಸೂರ್ಯನಾರಾಯಣ, ಜಿ.ಎಲ್.ನರಸಿಂಹಯ್ಯ, ಕದಿರಪ್ಪ, ವಿ.ಮಂಜುನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.