Bagepalli : ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ ಭಾನುವಾರ ತಾಲ್ಲೂಕು ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ (Nadaprabhu Kempegowda Jayanthi ), ಪ್ರತಿಭಾ ಪುರಸ್ಕಾರ ಹಾಗೂ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಸಚಿವ ಡಾ.ಕೆ.ಸುಧಾಕರ್ (K Sudhakar) “ನಾಡಪ್ರಭು ಕೆಂಪೇಗೌಡ ಅವರು ತಮ್ಮ ದೂರದೃಷ್ಟಿಯಿಂದ ಕೆರೆ, ಕಟ್ಟೆ ನಿರ್ಮಿಸಿ ಮಾದರಿ ರಾಜ್ಯ ಕಟ್ಟಿದ್ದರು. ಅವರ ಆಡಳಿತದ ವೈಖರಿ ಮತ್ತು ಬದ್ಧತೆ ರಾಜ ಪ್ರಭುತ್ವದ ಬಳಿಕವೂ ನವ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳ ಮೂಲಕ ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ (G V Shriramareddy) ಅವರು ಅಜರಾಮರಾಗಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿ GVS ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಿನ ತಿಂಗಳೊಳಗೆ ನಿವೇಶನ ನೀಡಲಾಗುವುದು ಮತ್ತು ಶೀಘ್ರದಲ್ಲೇ ದಲಿತ ಸಂಘರ್ಷ ಸಮಿತಿ ಮನವಿಯಂತೆ ಡಾ.ಬಿ.ಆರ್.ಅಂಬೇಡ್ಕರ್ (B R Ambedkar) ಭವನ ನಿರ್ಮಾಣ ನಿವೇಶನ ಹಂಚಿಕೆ ಮಾಡಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ಬಾಲಕಿಯರ ಶಾಲೆ ಆವರಣದವರಿಗೂ ಸಚಿವ ಸುಧಾಕರ್ ಮತ್ತು ಸಂಸದ ಬಿ.ಎನ್.ಬಚ್ಚೇಗೌಡ (B. N. Bache Gowda) ರವರ ರೋಡ್ ಶೋ ನಡೆಯಿತು. ಕಾರ್ಯಕರ್ತರು ನಾಯಕರಿಗೆ ಬೃಹತ್ ಸೇಬಿನ ಹಾರ ಹಾಕಿ ಜೈಕಾರ ಕೂಗಿದರು.
ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಡಾ.ಡಿ.ಕೆ. ರಮೇಶ್, ನ್ಯಾಷನಲ್ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ವಿ.ವೆಂಕಟಶಿವಾರೆಡ್ಡಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ, ಹಾಲು ಒಕ್ಕೂಟದ ನಿರ್ದೇಶಕ ವಿ.ಮಂಜುನಾಥರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ನರಸಿಂಹಾರೆಡ್ಡಿ, ಪ್ರಧಾನಕಾರ್ಯದರ್ಶಿ ವಿ.ಎಸ್.ಸೋಮಶೇಖರರೆಡ್ಡಿ, ಮುಖಂಡರಾದ ಗೋಪಾಲಕೃಷ್ಣ, ಸಿ.ಎನ್.ಭಾಸ್ಕರರೆಡ್ಡಿ, ಬೈರೆಡ್ಡಿ, ಶಿಕ್ಷಕ ಕಾರ್ಯದರ್ಶಿಗಳಾದ ಸುಧಾಕರ್, ಭಾಸ್ಕರರೆಡ್ಡಿ, ವೈ.ಎಸ್. ಪ್ರಮೀಳಾ ಉಪಸ್ಥಿತರಿದ್ದರು.