Bagepalli : ಬಾಗೇಪಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್‌ನ (Mega Lok Adalat) ಪೂರ್ವಭಾವಿ ಸಭೆಯಲ್ಲಿ ಸಿವಿಲ್ ನ್ಯಾಯಾಧೀಶ ಎಸ್.ಎಂ. ಅರುಟಗಿ ಭಾಗವಹಿಸಿದರು.
ಈ ವೇಳೆ ಮಾತನಾಡಿದ ನ್ಯಾಯಾಧೀಶರು “ಮಾರ್ಚ್ 12ರಂದು ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬೃಹತ್ ಲೋಕ ಅದಾಲತ್ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಕಕ್ಷಿದಾರರು ಪಡೆದುಕೊಳ್ಳಬೇಕು. ಕೌಟುಂಬಿಕ ವ್ಯಾಜ್ಯ, ಸಿವಿಲ್, ಹಣಕಾಸಿನ ವಿಚಾರ, ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು. ನ್ಯಾಯಾಲಯದಲ್ಲಿ ರಾಜೀ ಮಾಡಿಕೊಂಡರೆ ಮಾನವ ಸಂಬಂಧ, ಮೌಲ್ಯ ಗಳು, ಶಾಂತಿ, ನೆಮ್ಮದಿಯ ವಾತಾವರಣ ಮೂಡಿ ಕಕ್ಷಿದಾರರ ಅಮೂಲ್ಯವಾದ ಸಮಯ ಮತ್ತು ಹಣ ಇದರಿಂದ ಉಳಿಯುತ್ತದೆ.” ಎಂದು ಹೇಳಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಚಿನ್ನಸ್ವಾಮಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಮುಸ್ತಾಕ್ ಅಹಮದ್, ಹಿರಿಯ ವಕೀಲರಾದ ಅಪ್ಪಸ್ವಾಮಿ, ಎ.ಜಿ. ಸುಧಾಕರ್, ನಾರಾಯಣ, ಎ. ನಂಜುಂಡಪ್ಪ, ನಾಗಭೂಷಣ್ ನಾಯಕ್, ಬಾಲುನಾಯಕ್, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಡಿ.ಆರ್. ನಾಗರಾಜ್, ಜಿ.ಪಿ. ರಾಜು ಉಪಸ್ಥಿತರಿದ್ದರು.