Bagepalli : ಭಾರತ ಮಾರ್ಕ್ಸ್‌ವಾದಿ-ಲೆನಿನ್‍ವಾದಿ ಪಕ್ಷ (Red Flag) ಬಾಗೇಪಲ್ಲಿ ತಾಲ್ಲೂಕು ಸಮಿತಿ ಮುಖಂಡರು ಸೋಮವಾರ ಸಾಗುವಳಿದಾರರಿಗೆ ಸಾಗುವಳಿಚೀಟಿ ನೀಡುವಂತೆ, ರೈತರ ಸಾಲಮನ್ನಾ ಮಾಡುವಂತೆ, ಬಾಗೇಪಲ್ಲಿಗೆ ಕೃಷ್ಣಾ ನದಿ ನೀರು ಹರಿಸುವಂತೆ ಹಾಗೂ ಶಾಶ್ವತ ನೀರಾವರಿ ಕಲ್ಪಿಸುವಂತೆ ಆಗ್ರಹಿಸಿ ಡಾ.ಎಚ್.ಎನ್.ವೃತ್ತದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ (Protest) ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಮಾರ್ಕ್ಸ್‌ವಾದಿ-ಲೆನಿನ್‍ವಾದಿ ಪಕ್ಷ (ರೆಡ್‍ಪ್ಲಾಗ್) ತಾಲ್ಲೂಕು ಸಮಿತಿ ಕಾರ್ಯದರ್ಶಿ ಆರ್.ಎಂ.ಚಲಪತಿ “ಸಾರ್ವಜನಿಕ ಕ್ಷೇತ್ರ ಮತ್ತು ಸೇವಾ ವಲಯಗಳು ಕಾರ್ಪೋರೇಟ್ ಕಂಪನಿಗಳ ಏಕಸ್ವಾಮ್ಯ ಒಡೆತನದ ನಿಯಂತ್ರಣಕ್ಕೆ ಮಾಡಿದ್ದು ಖನಿಜ ಹಾಗೂ ನೈಸರ್ಗಿಕ ಸಂಪನ್ಮೂಲಗಳು ಲೂಟಿ ಆಗುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. 2024ರ ಮಾರ್ಚ್ ತಿಂಗಳ ಅಂತ್ಯಕ್ಕೆ ಅಭಿವೃದ್ಧಿ ಹೆಸರುಗಳಲ್ಲಿ ದೇಶದ ಸಾಲ ₹171.78 ಲಕ್ಷ ಕೋಟಿ ಏರಿಕೆ ಕಂಡರೂ ದೇಶದಲ್ಲಿ ಬಡತನ, ನಿರುದ್ಯೋಗ, ಹಸಿವು, ಬೆಲೆ ಏರಿಕೆ ಇಳಿಕೆ ಕಂಡಿಲ್ಲ” ಎಂದು ಆರೋಪಿಸಿ ಸರ್ವಾಧಿಕಾರಿ ವ್ಯವಸ್ಥೆಯನ್ನು ಸೋಲಿಸಿ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯ ಉಳಿಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಬಸವಲಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ರಾಮಚಂದ್ರ, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ವಿ.ರಘುನಾಥರೆಡ್ಡಿ, ಉಪಾಧ್ಯಕ್ಷ ಆದಿಶೇಷು, ಎಐಕೆಎಸ್ ಜಿಲ್ಲಾ ಸಂಘಟಕ ಮುದುಕಪ್ಪನಾಯಕ, ಮಧು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
