Bagepalli : ರೈಟ್ ಟು ಲೀವ್ ಫೌಂಡೇಶನ್ ವತಿನಿಂದ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ 9 ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ತರಗತಿಗಳಿಗೆ ಚಾಲನೆ ನೀಡಿ ಫೌಂಡೇಶನ್ ನಿರ್ದೇಶಕ ಟಿ.ವಿ. ಶ್ರೀಧರ್ ಮಾತನಾಡಿದರು.
ನಗರ ಪ್ರದೇಶದ ವಿದ್ಯಾರ್ಥಿಗಳ ಸರಿಸಮನಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಹ ಕಲಿಕೆಯಲ್ಲಿ ಮುಂದೆ ಬರಬೇಕು. ಸ್ಮಾರ್ಟ್ ತರಗತಿ ತಂತ್ರಜ್ಞಾನದ ಬಳಕೆಯಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಲಿಯಲು ನೆರವು ನೀಡಲಾಗುತ್ತಿದ್ದು, ತಾಲ್ಲೂಕಿನ 14 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳಿಗೆ ಅನುಕೂಲವಾಗಲು ಎಲ್‍ಇಡಿ ಟಿ.ವಿ ಗಳನ್ನು ವಿತರಣೆ ಮಾಡಲಾಗಿದೆ. ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಳೆದ ವರ್ಷ ತಾಲ್ಲೂಕಿನ ಗೂಳೂರು ಹೋಬಳಿಯ 5 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ತರಗತಿ ಸೌಲಭ್ಯ ಅಳವಡಿಸಲು ಎಲ್‍ಇಡಿ ಟಿ.ವಿ ವಿತರಣೆ ಮಾಡಲಾಗಿತ್ತು. ಈ ವರ್ಷದಲ್ಲಿ ಫೌಂಡೇಶನ್‌ನಿಂದ 9 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಎಲ್‍ಇಡಿ ಟಿ.ವಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ ಮಾತನಾಡಿ, ಶಿಕ್ಷಣ ಕ್ರಾಂತಿಯಿಂದ ಪ್ರಗತಿ ಹೊಂದಲು ಸಾಧ್ಯ. ಆದ್ದರಿಂದ ಮಕ್ಕಳು ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.