Bagepalli : ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಮತ್ತು ನಾಗಿರೆಡ್ಡಿಪಾಳ್ಯದ ದಲಿತ ಹೆಣ್ಣು ಮಕ್ಕಳು ಹಾಗೂ ಪೋಷಕರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರು ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವೆಂಕಟರಮಣ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿಯೂ ದಲಿತ ಮುಖಂಡರಿಗೆ ಗೌರವ ನೀಡುತ್ತಿಲ್ಲ. ದಲಿತ ಹೆಣ್ಣು ಮಕ್ಕಳು ಹಾಗೂ ಪೋಷಕರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿ ಗಡಿಪಾರು ಮಾಡಬೇಕು ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪೈಪಾಳ್ಯ ರವಿ ಮಾತನಾಡಿ, ದಲಿತರ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್ ಅನಿಲ್ ಕುಮಾರ್ ಹಾಗೂ ಆತನ ಸಹಚರರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಹಾಗೂ ನಿರ್ಲಕ್ಷ್ಯ ವಹಿಸಿದ ಸಬ್ ಇನ್‌ಸ್ಪೆಕ್ಟರ್‌ನನ್ನು ಕೂಡಲೇ ಅಮಾನತುಗೊಳಿಸಬೇಕು ಎಂದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕರಾದ ಎಲ್.ಎನ್.ನರಸಿಂಹಯ್ಯ, ಎಂ.ವಿ.ಲಕ್ಷ್ಮೀನರಸಿಂಹಪ್ಪ, ನಂಜುಂಡಪ್ಪ, ವಿ.ಗಂಗುಲಪ್ಪ, ಡಿ.ಕೆ.ರಮೇಶ್, ಎಚ್.ಎನ್.ಗೋಪಿ, ಜಯಂತ್, ಎನ್.ಕೋಟಪ್ಪ. ಎಂ.ವಿ.ನರಸಿಂಹಪ್ಪ, ಜೀವಿಕ ಸಂಚಾಲಕ ಆಂಜಿನಪ್ಪ, ಚೌಡಯ್ಯ, ಪಿ.ನಾಗಪ್ಪ, ನರಸಿಂಹಮೂರ್ತಿ, ಸೂರಿ, ವೈ.ನಾರಾಯಣಸ್ವಾಮಿ, ಶ್ರೀನಿವಾಸ್, ಗಂಗರಾಜು, ವಿಜಯಕುಮಾರ್ ಭಾಗಿಯಾಗಿದ್ದರು.