Sidlaghatta: ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ NSS ಘಟಕ ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ಮತ್ತು ಹಸಿರಿಗಾಗಿ ಉಸಿರು ಸಂಸ್ಥೆಯ ಸಹಯೋಗದಲ್ಲಿ ಅಂಗನವಾಡಿ, ಆಶಾ ಮತ್ತು ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳಿಗೆ Pulse Oximeter, N95 ಮಾಸ್ಕ್, ಸ್ಯಾನಿಟೈಸರ್ ಹಾಗೂ ಮೆಡಿಕಲ್ ಕಿಟ್ ಗಳನ್ನು ವಿತರಿಸಿ ಬೆಂಗಳೂರು ನಗರ ವಿಶ್ವವಿದ್ಯಾಲಯದ NSS ನ ಸಂಯೋಜನಾಧಿಕಾರಿ ಡಾ.ಎಚ್.ಜಿ.ಗೋವಿಂದಗೌಡ ಮಾತನಾಡಿದರು.
ಕೊರೊನಾ ಮೊದಲ ಅಲೆಗಿಂತ ಭಿನ್ನವಾಗಿ ಹರಡಿದ ಎರಡನೆ ಅಲೆಯಲ್ಲಿ ಕೋವಿಡ್ ವೈರಸ್ ರೋಗಿಯ ಶ್ವಾಸಕೋಶಕ್ಕೆ ದಾಳಿಯಿಟ್ಟು ಉಸಿರಾಟಕ್ಕೆ ತೊಂದರೆ ನೀಡುವ ಜೊತೆಗೆ ಜೀವಹಾನಿ ಮಾಡುತ್ತಿದೆ. ಕೋವಿಡ್ ಎರಡನೇ ಅಲೆ ಮಾರಕ ಎನ್ನುವ ಬಗ್ಗೆ ಜಾಗೃತಿ ಮೂಡಿಸಿದಲ್ಲಿ ಮಾತ್ರ ಕೊರೊನಾ ವಿರುದ್ಧ ಹೋರಾಟ ಮಾಡಲು ಸಾಧ್ಯ, ಗ್ರಾಮೀಣ ಜನರನ್ನು ಮುಗ್ಧತೆಯಿಂದ ಹೊರತರುವ ಕೆಲಸ ಪ್ರಜ್ಞಾವಂತರು ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಎಸ್.ನವೀನ್ ಕುಮಾರ್ ಮಾತನಾಡಿ, ಎನ್‌ಎಸ್‌ಎಸ್ ಸ್ವಯಂಸೇವಕರು ಮತ್ತು ಅಧಿಕಾರಿಗಳು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಸರ್ಕಾರ ಕೂಡಲೇ ಎನ್‌ಎಸ್‌ಎಸ್ ಅಧಿಕಾರಿ ಮತ್ತು ಸ್ವಯಂಸೇವಕರನ್ನು ಫ್ರೆಂಟ್ ಲೈನ್ ವಾರಿಯರ್ ಗಳೆಂದು ಘೋಷಿಸಿ ಆದ್ಯತೆ ಮೇರೆಗೆ ಲಸಿಕೆಯನ್ನು ನೀಡಬೇಕಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಎಚ್.ಜಿ. ಗೋಪಾಲಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ನರಸಿಂಹಮೂರ್ತಿ, ಕೃತಜ್ಞತಾ ಟ್ರಸ್ಟಿನ ರೋಹಿತ್, ಉಮೇಶ್, ಪವನ್, ರಮೇಶ್ ಹಾಜರಿದ್ದರು.
Your email address will not be published. Required fields are marked *
Save my name, email, and website in this browser for the next time I comment.
2021 Chikkaballapur.com