Bagepalli : Devikunte Hill
ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗುಡ್ಡ ಎಂದ ಕೂಡಲೇ ನಂದಿಬೆಟ್ಟ, ಸ್ಕಂದಗಿರಿ ಮುಂತಾದವು ಹೆಸರಿಸುತ್ತೇವೆ. ಆದರೆ ಜಿಲ್ಲೆಯ ಗಡಿಭಾಗದಲ್ಲಿನ ಬೆಟ್ಟಗುಡ್ಡ ಬಹಳಷ್ಟು ಸಂದರ್ಭದಲ್ಲಿ ನೆನಪಾಗುವುದೇ ಇಲ್ಲ. ಅಲ್ಲಿ ಪಾಳೇಗಾರರು ಕಟ್ಟಿದ ಕೋಟೆ, ಆಕರ್ಷಕ ಗೋಡೆಗಳು ಎಲ್ಲವೂ ಮರೆಯಾಗಿ ಬಿಡುತ್ತವೆ. ಅಂತಹದ್ದೇ ಅಪರೂಪದ ಬೆಟ್ಟಗುಡ್ಡಗಳ ಪೈಕಿ ಆಂಧ್ರಪ್ರದೇಶ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಗಡಿಭಾಗದಲ್ಲಿರುವ ದೇವಿಕುಂಟೆ ಬೆಟ್ಟವೂ ಒಂದು.
ಬಾಗೇಪಲ್ಲಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ದೇವಿಕುಂಟೆ (Devikunte, Bagepalli) ಬೆಟ್ಟದ ಮೇಲಿರುವ ಕೋಟೆಯ ಬದಿ ನಿಂತು ನೋಡುವಾಗ, ಬೆಂಗಳೂರು, ಮೈಸೂರು ಮುಂತಾದ ಊರುಗಳ ಪ್ರವಾಸಿಗರು ಪ್ರಸಿದ್ಧ ಬೆಟ್ಟಗುಡ್ಡಕ್ಕೆ ಬರುತ್ತಾರೆಯಾದರೂ ದೇವಿಕುಂಟೆ ಬೆಟ್ಟಕ್ಕೆ ಯಾರೂ ಸಹ ಬರುವುದಿಲ್ಲ ಎಂದೆನಿಸುತ್ತದೆ. ದನಗಾಯಿಗಳು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹೊರತುಪಡಿಸಿದರೆ, ಈ ಬೆಟ್ಟವನ್ನೇರಿದ ಅನುಭವ ಯಾರಿಗೂ ಇಲ್ಲ. ಪ್ರವಾಸಿಗರು ಯಾರೂ ಸಹ ಈ ಬೆಟ್ಟದತ್ತ ಸುಳಿಯುವುದಿಲ್ಲ.
ದೇವಿಕುಂಟೆ ಬೆಟ್ಟಕ್ಕೆ ಹೋಗುವುದು ಸುಲಭದ ಸಂಗತಿಯೇನಲ್ಲ. ಮಾರ್ಗಾನುಕುಂಟೆ, ಮಾಡಪ್ಪಲ್ಲಿ ಮಾರ್ಗಾವಾಗಿ ದೇವಿಕುಂಟೆ ಬೆಟ್ಟಕ್ಕೆ ಹೋಗಬೇಕು. ಆಂಧ್ರಪ್ರದೇಶ ಗಡಿಭಾಗದಿಂದ ಬರೀ 3 ಕಿ.ಮೀ. ಸಮೀಪದಲ್ಲಿರುವ ಈ ದೇವಿಕುಂಟೆ ಬೆಟ್ಟದ ಮೇಲೆ ಪಾಳೇಗಾರರು ಕೋಟೆ ಕಟ್ಟಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಬೆಟ್ಟದ ತುದಿಯಲ್ಲಿ ಗೋಡೆ ಕಟ್ಟಿಕೊಂಡು ಅಲ್ಲಿಂದ ವೈರಿಗಳನ್ನು ನಿಗಾ ವಹಿಸುತ್ತಿದ್ದರು.
ಗೋಡೆಯ ಪ್ರಮುಖ ಕಡೆಗಳಲ್ಲಿ ಕಾವಲುಗಾರರು ನಿಂತು ಎಲ್ಲವನ್ನೂ ಗಮನಿಸುತ್ತಿದ್ದರು. ದೂರದಲ್ಲಿ ಸಂಶಯಾಸ್ಪದ ಚಲನವಲನ ನಡೆದಿದ್ದು ಕಂಡು ಬಂದ ಕೂಡಲೇ ಪಾಳೇಗಾರರಿಗೆ ವಿಷಯ ಮುಟ್ಟುತಿತ್ತು. ವೈರಿಗಳನ್ನು ಎದುರಿಸಲು ಪಾಳೇಗಾರರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ನಂದಿಬೆಟ್ಟ ಅಥವಾ ಸ್ಕಂದಗಿರಿಯಲ್ಲಿ ಆಗಲಿ, ಬೆಟ್ಟದ ಮೇಲೆ ವೃತ್ತಾಕಾರದ ಗೋಡೆಗಳಿಲ್ಲ. ಆದರೆ ದೇವಿಕುಂಟೆ ಬೆಟ್ಟದಲ್ಲಿ ಎರಡು ಕಡೆಗಳಲ್ಲಿ ಅಂತಹ ಗೋಡೆಗಳಿವೆ. ಗೋಡೆ ಬದಿ ನಿಂತು ನೋಡಿದ್ದಲ್ಲಿ ಆಂಧ್ರಪ್ರದೇಶ ಗಡಿಯಲ್ಲಿನ ಬೆಟ್ಟಗುಡ್ಡಗಳು ಕಾಣಸಿಗುತ್ತವೆ. ಇಲ್ಲಿಂದ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರೆ, ವಿದೇಶದಲ್ಲಿನ ದೃಶ್ಯಗಳು ಸೆರೆ ಹಿಡಿದಂತೆ ಭಾಸವಾಗುತ್ತದೆ. ವಿಶೇಷವೆಂದರೆ, ಈ ಬೆಟ್ಟ ಹತ್ತಲು ಕನಿಷ್ಠ ಎರಡು ಗಂಟೆ ಬೇಕು.
– ರಾಹುಲ ಬೆಳಗಲಿ