Belluti, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಕೆರೆಯು (Belluti Lake) ಮಂಗಳವಾರ ಕೋಡಿ ಹರಿಯಿತು. KOCHIMUL ನಿರ್ದೇಶಕ ಆರ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಬೆಳ್ಳೂಟಿ ಸಂತೋಷ್, ಪ್ರೇಮಾ ಆನಂದ್, ಗ್ರಾಮದ ಬೆಳ್ಳೂಟಿ ವೆಂಕಟೇಶ್, ಚಂದ್ರಪ್ಪ, ನಿರಂಜನ್ ರೈತರೊಂದಿಗೆ ಕೆರೆಗೆ ತೆರಳಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಸುಮಾರು 426 ಎಕರೆ ವಿಸ್ತೀರ್ಣವಿರುವ ತಾಲ್ಲೂಕಿನ ದೊಡ್ಡ ಕೆರೆಗಳಲ್ಲೊಂದಾದ ಬೆಳ್ಳೂಟಿ ಕೆರೆಯು ಮಂಗಳವಾರ ಕೋಡಿ ಹರಿದಿದ್ದು, ಬೆಳ್ಳೂಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಕಳೆದ ವರ್ಷ ನವೆಂಬರ್ 21 ರಂದು ಬೆಳ್ಳೂಟಿ ಕೆರೆ ಕೋಡಿ ಹರಿದಿತ್ತು.
ಮುದುಕರಿಂದ ಮಕ್ಕಳಾದಿಯಾಗಿ ಕೋಡಿ ಹರಿಯುತ್ತಿದ್ದ ನೀರಿನಲ್ಲಿ ನಿಂತು, ಆಡಿ ನಲಿದರು. ನೀರನ್ನು ಸ್ಪರ್ಶಿಸಿ, ಆನಂದಿಸಿ ಹಿಂದಿರುಗುತ್ತಿದ್ದ ಕೆಲವರ ಕೈಯಲ್ಲಿ ಮೀನುಗಳಿತ್ತು. ದೊಡ್ಡ ಗಾತ್ರದ ಮೀನುಗಳನ್ನು ಹಿಡಿದು, ನೀರಿನಲ್ಲಿ ನಿಂತು ಕೆಲ ಯುವಕರು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಯುವಕ ಯುವತಿಯರ ಸಂಭ್ರಮ ಮುಗಿಲುಮುಟ್ಟಿತ್ತು.

ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳು ಮುಚ್ಚಿ ಹೋಗಿದ್ದ ಪರಿಣಾಮ ಕಳೆದ ವರ್ಷ ಜೋರಾಗಿ ಬಿದ್ದ ಮಳೆ ನೀರು ಸಮರ್ಪಕವಾಗಿ ಸಾಗದೆ, ತೋಟಗಳಿಗೆ ನುಗ್ಗಿ ಅಪಾರ ಬೆಳೆ ನಷ್ಟವುಂಟಾಗಿತ್ತು. ಆನಂತರ H N ವ್ಯಾಲಿ ಕಾಮಗಾರಿ ನಡೆದು ಪ್ರತಿಯೊಂದು ರಾಜಕಾಲುವೆಗಳನ್ನು ಸರಿಪಡಿಸಿದ ಪರಿಣಾಮ ಇದೀಗ ಕೆರೆಗಳಿಗೆ ನೀರು ಸರಾಗವಾಗಿ ಸಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬೆಳ್ಳೂಟಿ ಸಂತೋಷ್, “ನಮಗೆಲ್ಲಾ ಇಂದು ದೊಡ್ಡ ಹಬ್ಬದಂತೆ ಭಾಸವಾಗುತ್ತಿದೆ. ನೀರನ್ನು ನೋಡಿ ಅತ್ಯಂತ ಸಂತಸವಾಗುತ್ತಿದೆ. ಜಿಲ್ಲೆಯ ಕಂದವಾರ ಕೆರೆ, ಗೋಪಾಲಕೃಷ್ಣ ಕೆರೆ, ಮಂಚನಬೆಲೆ, ಮುಷ್ಟೂರು, ರಂಗಧಾಮನಕೆರೆ, ಜಾತವಾರ, ಕೇಶವಾರ ಕೆರೆ, ರಾಳ್ಳಕೆರೆಗಳು ತುಂಬಿ ನೀರು ಹರಿದು ಬಂದು ನಮ್ಮ ಬೆಳ್ಳೂಟಿ ಕೆರೆಯೂ ಕೋಡಿ ಹರಿದಿದೆ. ತಾಲ್ಲೂಕಿನ ಮೇಲೂರು, ಚೌಡಸಂದ್ರ, ಭಕ್ತರಹಳ್ಳಿ, ಬೆಳ್ಳೂಟಿ, ನಾಗಮಂಗಲ, ಕಾಕಚೊಕ್ಕೊಂಡಹಳ್ಳಿಯಿಂದ ಭದ್ರನಕೆರೆಯ ಗಡಿಯವರೆಗಿನ ಗ್ರಾಮಸ್ಥರಿಗೆಲ್ಲಾ ಈ ನೀರಿನ ಹರಿವು ವರದಾನವಾಗಲಿದೆ.
2016 ರಿಂದಲೂ ನರೇಗಾ ಯೋಜನೆಯನ್ನು ಸದ್ಭಳಕೆ ಮಾಡಿಕೊಂಡು ಬೆಳ್ಳೂಟಿ ಕೆರೆಯಲ್ಲಿ 2000 ಕ್ಕೂ ಅಧಿಕ ಟ್ರಾಕ್ಟರ್ ಮತ್ತು ಟಿಪ್ಪರ್ ಲೋಡ್ ಗಳಷ್ಟು ಹೂಳುಮಣ್ಣನ್ನು ತೆಗೆದಿದ್ದಲ್ಲದೆ, ಕೆರೆಗೆ ನೀರು ಹರಿದು ಬರಲು ರಾಜ ಕಾಲುವೆಗಳ ತೆರವು, ಕಿರುಗಾಲುವೆಗಳು ಹಾಗೂ ನೀರು ಕಾಲುವೆಗಳನ್ನು ನಿರ್ಮಿಸಿದ್ದೆವು. ಕೆರೆಯ ನಟ್ಟ ನಡುವೆ ಐದು ಎಕರೆಯಷ್ಟು ಬಂಡ್ ನಿರ್ಮಾಣ ಮಾಡಿ ಅದರಲ್ಲಿ ಸುಮಾರು 2000 ಹಣ್ಣುನ ಗಿಡಗಳನ್ನು ನೆಟ್ಟಿದ್ದೆವು. ಇದೀಗ ನಮ್ಮ ಶ್ರಮಕ್ಕೆ ಎಚ್.ಎನ್ ವ್ಯಾಲಿ ನೀರು ಸಹಕರಿಸಿದೆ ಮತ್ತು ವರುಣದೇವ ವರ ನೀಡಿದ್ದಾನೆ. ಕಳೆದ 30 ವರ್ಷಗಳ ಹಿಂದೆ ಈ ಕೆರೆ ಕೋಡಿ ಹರಿದಿತ್ತು. ನಂತರ ಕಳೆದ ವರ್ಷ ಕೋಡಿ ಹರಿದಿದ್ದು, ಇದೀಗ ಮತ್ತೆ ಅಂತಹ ಸುಭಿಕ್ಷ ಕಾಲ ಮರುಕಳಿಸಿದೆ” ಎಂದು ಸಂತಸ ವ್ಯಕ್ತಪಡಿಸಿದರು.