Gauribidanur: ಮಂಗಳವಾರ ಗೌರಿಬಿದನೂರು ನಗರದ ಕೆನರಾ ಬ್ಯಾಂಕ್ ಎಂ.ಜಿ ರಸ್ತೆಯ ಶಾಖೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಬ್ಯಾಂಕ್ ನ ಪೀಠೋಪಕರಣಗಳು, ಕಂಪ್ಯೂಟರ್, ಎಸಿ ಯಂತ್ರಗಳು ಸೇರಿದಂತೆ ಇತರ ವಸ್ತುಗಳು ಭಸ್ಮವಾಗಿವೆ.
ಬ್ಯಾಂಕ್ ಸಿಬ್ಬಂದಿ ಅವಘಡದ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಿಪಿಐ ಎಸ್.ಡಿ.ಶಶಿಧರ್ ಹಾಗೂ ನಗರ ಪಿಎಸೈ ಪ್ರಸನ್ನ ಕುಮಾರ್ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ಶಾಖೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬ್ಯಾಂಕ್ ವ್ಯವಸ್ಥಾಪಕ ಮೋಹನ್, ಎಂದಿನಂತೆ ಮಂಗಳವಾರ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಕಚೇರಿಗೆ ಆಗಮಿಸಿದ ಹೊಗೆ ಬರುತ್ತಿರುವುದನ್ನು ಕಂಡ ನನಗೆ ಮಾಹಿತಿ ನೀಡಿದರು. ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು. ಪೀಠೋಪಕರಣಗಳು, ಕಂಪ್ಯೂಟರ್, ಎಸಿ ಯಂತ್ರಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ವಸ್ತುಗಳು ಹಾಳಾಗಿದ್ದು, ಶಾಖೆಗೆ ಸಂಬಂಧಿಸಿದ ದಾಖಲೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅವರು ತಿಳಿಸಿದರು.