Chikkaballapur : ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಬೈರಪ್ಪ ಶಿವಲಿಂಗ ನಾಯಿಕ ” ಎಚ್‌ಐವಿ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತದೆ. ಇದರಿಂದ ಎಚ್ಐವಿ ಕೇವಲ ವ್ಯಕ್ತಿಯೊಬ್ಬನ ಆರೋಗ್ಯಕ್ಕೆ ಮಾತ್ರವಲ್ಲ ಆತನ ಕುಟುಂಬದ ಮೇಲೆ ಸಾಮಾಜಿಕ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಸೋಂಕಿತರು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಸಹ ಇವೆ. ಎಲ್ಲರೂ ಒಗ್ಗೂಡಿ ಎಚ್‌ಐವಿ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಸೋಂಕಿತರಿಗೆ ನೈತಿಕ ಬೆಂಬಲ ಸೂಚಿಸಬೇಕು. ” ಎಂದು ತಿಳಿಸಿದರು.
ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಏಡ್ಸ್ ಮತ್ತು ಎಚ್ಐವಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಪ್ರಸಕ್ತ 2020–21ನೇ ಸಾಲಿನಲ್ಲಿ ಎಚ್‌ಐವಿ ಪರೀಕ್ಷೆಗೆ ಜಿಲ್ಲೆಯಲ್ಲಿ 20,867 ಗುರಿ ಹೊಂದಲಾಗಿದೆ. ಈ ಪೈಕಿ 19,293 ಜನರನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ16 ಜನರಲ್ಲಿ ಸೋಂಕು ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಹೇಳಿದರು.
ಶಿಡ್ಲಘಟ್ಟ
Sidlaghatta :
ಬುಧವಾರ ಶಿಡ್ಲಘಟ್ಟ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆಹನುಮಂತಪ್ಪ ” ಬೇರೆ ರೋಗದಂತೆ ಏಡ್ಸ್ ಸಹ ಒಂದು ರೋಗ. ನಮ್ಮಂತೆ ಅವರೂ ಮನುಷ್ಯರು. ನಮ್ಮೊಂದಿಗೆ ಅವರಿಗೂ ಬದುಕುವ ಅರ್ಹತೆ ಇದೆ. ವಿಶ್ವ ಏಡ್ಸ್ ದಿನಾಚರಣೆ ವಿಶ್ವದಾದ್ಯಂತ ಎಚ್‌ಐವಿ ಸೋಂಕಿನಿಂದ ಪ್ರಾಣ ತ್ಯಜಿಸಿದವರಿಗಾಗಿ ಆಚರಿಸಲ್ಪಡುವ ದಿನವಾಗಿದ್ದು , ಮಾನಸಿಕ ಸ್ಥೈರ್ಯ ತುಂಬುವ ಜೊತೆಗೆ ಜಾಗೃತಿ ಮೂಡಿಸುವ ದಿನವಾಗಿ ಆಚರಿಸಲಾಗುತ್ತಿದೆ. ಸಮಾಜದ ಪ್ರತಿಯೊಬ್ಬರೂ ಎಚ್‌ಐವಿ, ಏಡ್ಸ್ ಸೋಂಕಿತ ವ್ಯಕ್ತಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ” ಎಂದು ತಿಳಿಸಿದರು.
ಸರ್ಕಾರ ಏಡ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜನತೆ ಇತ್ತೀಚೆಗೆ ಜಾಗೃತರಾಗುತ್ತಿರುವುದರಿಂದ ಏಡ್ಸ್ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್.ಎ.ಪಚ್ಚಾಪುರೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ತಹಶೀಲ್ದಾರ್ ಬಿ.ಎಸ್.ರಾಜೀವ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸಿಡಿಪಿಒ ಮಹೇಶ್, ನಾರಾಯಣಪ್ಪ, ನರಸಿಂಹಮೂರ್ತಿ, ಪರಿಮಳ, ಸತೀಶ್, ದೇವರಾಜ್, ಮುನಿರತ್ನಮ್ಮ, ಲೋಕೇಶ್, ಕೀರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಿಂತಾಮಣಿ
ಬುಧವಾರ ಸರ್ಕಾರಿ ಬಾಲಕರ ಮತ್ತು ಮಹಿಳಾ ಕಾಲೇಜಿನ ಮುಂಭಾಗದಲ್ಲಿ ಆಯೋಜಿಸಿದ್ದ ಏಡ್ಸ್ ಜಾಗೃತಿ ಜಾಥಾಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ ಚಾಲನೆ ನೀಡಿದರು. ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿ ಭಿತ್ತಿಪತ್ರಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಏಡ್ಸ್ ಜಾಗೃತಿ ಜಾಥಾ ನಡೆಸಿದರು.
ಏಡ್ಸ್ ತಡೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಡಿಸೆಂಬರ್ 1ರಂದು ಏಡ್ಸ್ ದಿನಾಚರಣೆ ಆಚರಿಸಲಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ ತಿಳಿಸಿದರು.
ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್.ಮಂಜುನಾಥ್, ಜಿ.ಜೆ.ಶಿವಕುಮಾರ್, ಹನುಮಂತರಾಯಪ್ಪ, ಮಹಿಳಾ ಕಾಲೇಜಿನ ಶಿವಶಂಕರಪ್ರಸಾದ್, ಡಾ.ಕೆ.ಶಾರದಾ, ಎಸ್.ರಾಜಾರಾಂ, ಶ್ರೀನಿವಾಸರೆಡ್ಡಿ ಉಪಸ್ಥಿತರಿದ್ದರು.