Chikkaballapur : ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣಮಂಟಪದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾ (BJP Raita Morcha) ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿತ್ತು. Covid-19 ಸೋಂಕಿಗೆ ಒಳಗಾಗಿರುವುದರಿಂದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು Home Isolation ನಲ್ಲಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ (Dr. K. Sudhakar) ಸಭೆಗೆ ಗೈರಾಗಿದ್ದರು. ರಾಜ್ಯದ ವಿವಿಧ ಭಾಗಗಳ 100 ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದು ಕಾರ್ಯಚಟುವಟಿಕೆಗಳ ಅವಲೋಕನ ಮತ್ತು ಮುಂದಿನ ಕಾರ್ಯಯೋಜನೆ, ಕೃಷಿಯಲ್ಲಿ ಹೊಸ ಆಯಾಮಗಳು, ಮೇಕೆದಾಟು ಯೋಜನೆ ರಾಜಕೀಕರಣಗೊಳಿಸಲು Congress ನಡಿಗೆಗೆ ಖಂಡನೆಯ ಬಗ್ಗೆ ಗೋಷ್ಠಿಗಳನ್ನು ನಡೆಸಿದರು.
ಸಭೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ “ರೈತರ ಆದಾಯ ದ್ವಿಗುಣ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯಕ್ಕೆ ₹ 75 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರ ಅಭಿವೃದ್ಧಿಗೆ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು 1.34 ಲಕ್ಷ ಕೋಟಿಯನ್ನು ಕೃಷಿ ವಲಯಕ್ಕೆ ಮೀಸಲಿಡಲಾಗಿದೆ. ಡಿಎಪಿ, ಯೂರಿಯಾ ಸೇರಿದಂತೆ ರಸಗೊಬ್ಬರಕ್ಕೆ ಶೇ 50ರಷ್ಟು ರಿಯಾಯಿತಿ ನೀಡಿ ಕಿಸಾನ್ ಮಾನ್ ಧನ ಯೋಜನೆ ಜಾರಿಗೊಳಿಸಿದ್ದಾರೆ. ರೈತರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಯತ್ನ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಒಬ್ಬ ಶಾಸಕರು ಇಲ್ಲದ ರಾಮನಗರ ಜಿಲ್ಲೆಯ ರೈತಗೆ ₹ 180 ಕೋಟಿ ನೀಡಲಾಗಿದ್ದು ಬಿಜೆಪಿ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಕಾಣುತ್ತಿದೆ. ಐದು ವರ್ಷಕ್ಕೆ ಒಂದು ಕುಟುಂಬಕ್ಕೆ ಕಿಸಾನ್ ಸಮ್ಮಾನ್ ಯೋಜನೆಯಡಿ ₹ 50 ಸಾವಿರ ದೊರೆಯುತ್ತದೆ. ಇಷ್ಟು ಹಣವನ್ನು ಕಾಂಗ್ರೆಸ್ ಎಂದಾದರೂ ರೈತರಿಗೆ ನೀಡಿದೆಯೇ” ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿದರು. ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜಶೇಖರ್, ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ಪಾಲ್ಗೊಂಡಿದ್ದರು.