Chikkaballapur : ರಾಮನಗರದಲ್ಲಿ ಸೋಮವಾರ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿ ಸಂಸದ ಡಿ.ಕೆ. ಸುರೇಶ್ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದ ಬಲಮುರಿ ವೃತ್ತದಲ್ಲಿ ಮಂಗಳವಾರ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಸುದ್ಧಿಗಾರರೊಂದಿಗೆ ಮಾತನಾಡಿ ” ಮುಖ್ಯಮಂತ್ರಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ರಾಮನಗರಕ್ಕೆ ತೆರಳಿದ್ದಾಗ ಸುರೇಶ್ ಹಾಗೂ ರವಿ ನಡೆದುಕೊಂಡ ರೀತಿ ಖಂಡನೀಯ. ಹಳೇ ಕಾಲದಿಂದಲೂ ಇವರು ಗೂಂಡಾ ಪ್ರವೃತ್ತಿಯಿಂದ ನಡೆದುಕೊಂಡು ಬಂದಿದ್ದು ಈಗ ಅದನ್ನೇ ಮುಂದುವರಿಸುತ್ತಿದ್ದಾರೆ. ಅವರಿಗೆ ತಕಾತ್ತಿದ್ದರೆ ಜನಪರ ಕಾರ್ಯಕ್ರಮಗಳನ್ನು ಮಾಡಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರದ ನೀಡುವ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಹ ಬಿಡುತ್ತಿಲ್ಲ. ಇವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎಲ್ಲೆಡೆ ನಾಶವಾಗುತ್ತದೆ” ಎಂದು ಹೇಳಿದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಉಪಾಧ್ಯಕ್ಷ ಲೋಕೇಶ್ ಗೌಡ, ವಿಭಾಗದ ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗೌಡಗೆರೆ ರಾಜಶೇಖರ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಅಭಿಷೇಕ್ ಗೌಡ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಎಸ್.ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ವೆಂಕಟೇಶ್, ರಾಮಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಚಿಂತಾಮಣಿ
Chintamani : ಚಿಂತಾಮಣಿ ನಗರದ ಬಿಜೆಪಿ ಕಚೇರಿ ಬಳಿ ಕಾರ್ಯಕರ್ತರು ಜಮಾವಣೆಗೊಂಡು ಸುರೇಶ್ ಮತ್ತು ರವಿ ವಿರುದ್ಧ ಘೋಷಣೆ ಕೂಗಿ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬೆಂಗಳೂರು ವೃತ್ತದಲ್ಲಿ ಸುರೇಶ್ ಅವರ ಪ್ರತಿಕೃತಿ ದಹಿಸಿದರು.
ಮುಖ್ಯಮಂತ್ರಿ ಸಮ್ಮುಖದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿರುದ್ಧ ಸುರೇಶ್ ಮತ್ತು ರವಿ ಗೂಂಡಾ ವರ್ತನೆ ತೋರಿದ್ದಾರೆ. ಹಿರಿಯ ಮುಖಂಡರೇ ಈ ರೀತಿ ವರ್ತಿಸಿದರೆ ಕಾರ್ಯಕರ್ತರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಊಹಿಸಿದರೆ ಆತಂಕವಾಗುತ್ತದೆ. ಮುಖ್ಯಮಂತ್ರಿ ಇದ್ದ ವೇದಿಕೆಯಲ್ಲಿ ಈ ರೀತಿ ವರ್ತಿಸಿರುವುದು ಸಂಸದರಿಗೆ ಶೋಭೆ ತರುವುದಿಲ್ಲ ಎಂದು ಮುಖಂಡ ನಾ. ಶಂಕರ್ ತಿಳಿಸಿದರು.
ಪಕ್ಷದ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವಾರೆಡ್ಡಿ, ನಗರ ಘಟಕದ ಅಧ್ಯಕ್ಷ ಮಹೇಶ್ ಬೈ, ಮುಖಂಡರಾದ ಪ್ರಕಾಶ್ ಗುಪ್ತ, ಡಾಬಾ ಮಂಜುನಾಥ್, ಮನೋಹರ್ ರೆಡ್ಡಿ, ಭಾಗ್ಯಮ್ಮ, ಪರಿಮಳಾ, ಪ್ರಮೀಳಾ, ಶಾಮಲಮ್ಮ, ನಾರಾಯಣರಾಜ್, ಸಿ.ಆರ್. ವೆಂಕಟೇಶ್, ಸಿ.ಆರ್. ಅಶ್ವತ್ಥ್, ಸದಾಶಿವರೆಡ್ಡಿ, ಕೆ.ಎಂ. ಆಂಜನಪ್ಪ, ಎನ್. ಶ್ರೀನಿವಾಸರೆಡ್ಡಿ, ಗೋಕುಲ್ ಶ್ರೀನಿವಾಸ್, ಅನಿಲ್, ಶಿರೀಷ್, ನವೀನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.