Chintamani : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಚಿಂತಾಮಣಿ ನಗರದ ನಗರಸಭೆ ಸಭಾಂಗಣದಲ್ಲಿ ಡೇ-ನಲ್ಮಾ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷೆ “ಕೇಂದ್ರ ಸರ್ಕಾರದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಅನೇಕ ಸೌಲಭ್ಯ ಕಲ್ಪಿಸಿದ್ದು, ವ್ಯಾಪಾರಿಗಳು ಸದುಪಯೋಗ ಪಡಿಸಿಕೊಂಡು ಬೀದಿಬದಿ ವ್ಯಾಪಾರಿಗಳ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು. ವ್ಯಾಪಾರಸ್ಥರು ಸದಾ ಇಲಾಖೆಯ ಅಧಿಕಾರಿಗಳ ಸಂಪರ್ಕದಲ್ಲಿ ಇದ್ದು ನಗರಸಭೆಯಿಂದ ಸಿಗುವ ಸೌಲಭ್ಯ ಪಡೆಯಲು ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತಂದರೆ ಶೀಘ್ರವೇ ಬಗೆಹರಿಸಲಾಗುವುದು” ಎಂದು ಹೇಳಿದರು.
ಬೀದಿಬದಿ ಮತ್ತು ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ವಿವಿಧ ಯೋಜನೆಗಳನ್ನು ಡೇ-ನಲ್ಮ್ (DAY-NULM) ಯೋಜನೆಯಡಿ ಅನುಷ್ಠಾನಕ್ಕೆ ತಂದಿದ್ದು ಈ ನಿಟ್ಟಿನಲ್ಲಿ ಸಣ್ಣ ವ್ಯಾಪಾರಸ್ಥರು ಜಾಗೃತರಾಗಿ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಬೇಕು. ನೂತನವಾಗಿ ಜಾರಿಗೆ ತಂದಿರುವ ಬೀದಿಬದಿ ವ್ಯಾಪಾರಿಗಳ ರಕ್ಷಣೆ ಮತ್ತು ಕಾಯ್ದೆಯಡಿ ವ್ಯಾಪಾರಿಗಳು ವ್ಯಾಪಾರ ಸಮಿತಿ ರಚಿಸಿಕೊಂಡು ವ್ಯಾಪಾರಿಗಳು ನಗರಸಭೆಗೆ ದಾಖಲಾತಿ ನೀಡಿ ಗುರುತಿನ ಚೀಟಿ ಪಡೆದು ಸರ್ಕಾರ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದು ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಇಲಾಖೆಯ ಅಧಿಕಾರಿ ವೆಂಕಟಾಚಲಪತಿ ತಿಳಿಸಿದರು
ಪೌರಾಯುಕ್ತ ಉಮಾಶಂಕರ್, ಬೀದಿಬದಿ ವ್ಯಾಪಾರಿಗಳ ತಾಲ್ಲೂಕು ಸಂಘದ ಅಧ್ಯಕ್ಷ ಸೋಫಿ ಸಲೀಂ, ಉಪಾಧ್ಯಕ್ಷೆ ರೆಡ್ಡಮ್ಮ, ಕಾರ್ಯದರ್ಶಿ ಲೋಕೇಶ್ ಎನ್. ನಾಯಕ್, ಪ್ರಧಾನ ಕಾರ್ಯದರ್ಶಿ ಪಾರ್ವತಮ್ಮ, ಪದಾಧಿಕಾರಿಗಳಾದ ನಯಾಜ್, ಪಿ. ಮೋಹನ್ ಬಾಬು, ಶಬ್ಬೀರ್ ಅಹ್ಮದ್, ಫರ್ವೀನ್ ತಾಜ್, ಜಿ. ವಿಶ್ವಾಸ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.