Chikkaballapur : ಪ್ರತಿ ಜಿಲ್ಲೆಗೂ ಒಂದು ಸಂಚಾರಿ ವೈದ್ಯಕೀಯ ವಾಹನವನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ (Saptagiri Hospital, Bangalore) ಒದಗಿಸಲಾಗಿದ್ದು, ಭಾನುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಸಪ್ತಗಿರಿ ಆಸ್ಪತ್ರೆಯ ವ್ಯವಸ್ಥಾಪಕ ಜಿ.ಡಿ. ಮನೋಜ್ ಸಂಚಾರಿ ವೈದ್ಯಕೀಯ ಚಿಕಿತ್ಸಾ ವಾಹನಕ್ಕೆ (Clinic on Wheels) ಚಾಲನೆ ನೀಡಿದರು. ಈ ಸಂದರ್ಭದಲ್ಲಿ MES ಪ್ರತಿಷ್ಠಾನ ಮತ್ತು Hope Foundation ಸಹಯೋಗದಲ್ಲಿ ಒಂದು ಸಾವಿರ ಜನರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಸಲಾಯಿತು. ಹೃದ್ರೋಗ, ಸ್ತ್ರೀರೋಗ, ಮೂಳೆ, ಹರ್ನಿಯಾ, ನೇತ್ರ ತಪಾಸಣೆ, ನರರೋಗ, ಮೂತ್ರಪಿಂಡ, ನರರೋಗ, ಕಿವಿ, ಮೂಗು, ಗಂಟಲು ಮತ್ತಿತರೆ ಸಮಸ್ಯೆಗಳಿಗೆ ತಜ್ಞ ವೈದ್ಯರ ತಂಡ ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿತು.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಮನೋಜ್, ಪ್ರತಿಯೊಂದು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಇಬ್ಬರು ವೈದ್ಯರ ತಂಡವಿರುವ ಸಂಚಾರಿ ವೈದ್ಯಕೀಯ ವಾಹನ ಸಂಚರಿಸಿ, ಆರೋಗ್ಯ ತಪಾಸಣೆ ನಡೆಸಲಿದೆ. ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ ಸಾಧ್ಯವಾದರೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುವುದು ಹಾಗೂ ಅಗತ್ಯವಿದ್ದರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಈ ಎಲ್ಲ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರಲಿದ್ದು ಸಂಚಾರಿ ವೈದ್ಯಕೀಯ ವಾಹನದಲ್ಲಿ ಇಬ್ಬರು ವೈದ್ಯರು, ಒಬ್ಬರು ಶುಶ್ರೂಷಕಿ ಇರುತ್ತಾರೆ ಎಂದು ಹೇಳಿದರು.