Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈವರೆಗೆ ವಾಡಿಕೆ ಪ್ರಮಾಣ 203 ಮಿ.ಮೀ ಮಳೆಯಾಗಬೇಕಾಗಿದ್ದು, ಪ್ರಸ್ತುತ 198 ಮಿ.ಮೀ ಮಳೆಯಾಗಿದೆ. ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಈವರೆಗೆ ಶೇ 8 ರಷ್ಟು ಮಾತ್ರ ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾದಲ್ಲಿ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಗೆ ಸೂಕ್ತ ಕ್ರಮವಹಿಸಬೇಕು.
ಬೆಳೆ ವಿಮೆಗೆ ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಈಗಾಗಲೆ ಆಗಿರುವ ಬೆಳೆ ಹಾನಿಗೆ ನಿಯಮಾನುಸಾರ ಪರಿಹಾರ ಒದಗಿಸಬೇಕು. ಶೇ 98 ರಷ್ಟು ಬೆಳೆ ಹಾನಿಯ ವಿವರವನ್ನು ಪರಿಹಾರ್ ಪೋರ್ಟಲ್ ನಲ್ಲಿ ನಮೂದು ಮಾಡಲಾಗಿದ್ದು, ಉಳಿದದ್ದನ್ನು ಶೀಘ್ರದಲ್ಲೇ ನಮೂದಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರಿನ ಪೂರೈಕೆಗೆ ಒತ್ತು :
ಕುಡಿಯುವ ನೀರಿನ ಪೂರೈಕೆಗೆ ಸರ್ಕಾರ ಅನುದಾನವನ್ನು ನೀಡಿದೆ. ಈ ಅನುದಾನದಲ್ಲಿ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಅಲ್ಲಿನ ಖಾಸಗಿ ಕೊಳವೆ ಬಾವಿಗಳ ಮಾಲೀಕರ ಸಹಕಾರ ಪಡೆದು ವ್ಯತ್ಯಯ ಆಗದಂತೆ ನೀರು ಪೂರೈಕೆ ಮಾಡಬೇಕು. ಜಿಲ್ಲೆಯಾದ್ಯಂತ ಪ್ರಸ್ತುತ 13 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಆ ಗ್ರಾಮಗಳಲ್ಲಿ ನೀರು ಪೂರೈಕೆಗೆ ಅಗತ್ಯ ಸೂಚನೆ ನೀಡಲಾಗಿದೆ. ಶಿಡ್ಲಘಟ್ಟ ತಾಲ್ಲೂಕು ಒಂದರಲ್ಲೆ ಮುಂದಿನ 15 ದಿನಗಳಲ್ಲಿ 10 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದ್ದು, ಪರಿಹಾರಕ್ಕೆ ಆದ್ಯತೆ ಮೇಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ :
ಸುಸ್ಥಿತಿಯಲ್ಲಿರುವ ಶಾಲಾ ಕಾಲೇಜುಗಳ ಕಟ್ಟಡಗಳಲ್ಲಿ ಪಾಠ ಪ್ರವಚನಗಳು ನಡೆಯಬೇಕು. ಸುಸ್ಥಿತಿ ಪ್ರಮಾಣ ಪತ್ರ ಇಲ್ಲದಿರುವ ಕಟ್ಟಡಗಳಲ್ಲಿ ಯಾವುದೇ ಕಾರಣಕ್ಕೂ ತರಗತಿಗಳು ನಡೆಯಕೂಡದು. ಅಂತಹ ಕಟ್ಟಡಗಳ ಮಾಹಿತಿ ನೀಡಿ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯನ್ನು ಗ್ರೀನ್ ಅಂಡ್ ಕ್ಲೀನ್, ಪ್ಲಾಸ್ಟಿಕ್ ಮುಕ್ತ ಮಾಡಲು ಈಗಾಗಲೇ ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಿದ್ದು, ತಾಲ್ಲೂಕು ಮಟ್ಟದ ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಜನರನ್ನು ಅಲೆದಾಡಿಸದೆ ತ್ವರಿತಗತಿಯಲ್ಲಿ ಅಹವಾಲುಗಳನ್ನು ವಿಲೇವಾರಿ ಮಾಡಬೇಕು. ಸರ್ಕಾರದ ಎಲ್ಲಾ ಯೋಜನೆಗಳು, ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ಆ ನಿಟ್ಟಿನಲ್ಲಿ ಕ್ರಮವಹಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆಗಳನ್ನು ನೀಡಿ, ಜಿಲ್ಲಾಧಿಕಾರಿಗಳು ವಿವಿಧ ಕಡತಗಳನ್ನು ತಪಾಸಣೆ ನಡೆಸಿದರು. ಜೊತೆಗೆ ತಾಲ್ಲೂಕು ಕಚೇರಿಯ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.
ಜಂಗಮಕೋಟೆ ನಾಡಕಚೇರಿಗೆ ಭೇಟಿ :
ತಾಲ್ಲೂಕು ಕಚೇರಿ ಭೇಟಿ ನಂತರ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಜಂಗಮಕೋಟೆ ನಾಡಕಚೇರಿಗೆ ಭೇಟಿ ನೀಡಿ, ಅಹವಾಲು ಸ್ವೀಕರಿಸಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.ಈ ವೇಳೆ ವಿವಿಧ ಯೋಜನೆಗಳ ಪಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಮುನಿರಾಜ, ನಗರಸಭೆಯ ಪೌರಾಯುಕ್ತ ಆರ್.ಶ್ರೀಕಾಂತ್ ಹಾಜರಿದ್ದರು.